ಭಾರತದ ವಿರುದ್ಧದ ಮೊಕದ್ದಮೆಯಲ್ಲಿ ಬ್ರಿಟನ್ ಕಂಪೆನಿಗೆ ಬೃಹತ್ ಜಯ
ಕೇರ್ನ್ ಎನರ್ಜಿಯ 10,247 ಕೋಟಿ ರೂ. ತೆರಿಗೆ ರದ್ದು; 8,000 ಕೋಟಿ ರೂ. ಪರಿಹಾರ ನೀಡುವಂತೆಯೂ ಭಾರತಕ್ಕೆ ಆದೇಶ
ಲಂಡನ್, ಡಿ. 23: ಬ್ರಿಟನ್‌ನ ತೈಲ ಮತ್ತು ಅನಿಲ ಶೋಧ ಕಂಪೆನಿ ಕೇರ್ನ್ ಎನರ್ಜಿಯು ತೆರಿಗೆ ವಿವಾದಕ್ಕೆ ಸಂಬಂಧಿಸಿ ಭಾರತದ ವಿರುದ್ಧ ಹೂಡಿದ್ದ ಅಂತರ್‌ರಾಷ್ಟ್ರೀಯ ಮೊಕದ್ದಮೆಯೊಂದರಲ್ಲಿ ಜಯ ಪಡೆದಿದೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.
ನೆದರ್‌ಲ್ಯಾಂಡ್ಸ್ ರಾಜಧಾನಿ ದ ಹೇಗ್‌ನಲ್ಲಿರುವ ಅಂತರ್‌ರಾಷ್ಟ್ರೀಯ ಪಂಚಾಯಿತಿ ನ್ಯಾಯಮಂಡಳಿಯು ಮಂಗಳವಾರ ತಡ ರಾತ್ರಿ ನೀಡಿದ ಆದೇಶದಲ್ಲಿ, ಹಿಂದಿನ ತೆರಿಗೆ ಬಾಕಿ 10,247 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸುವಂತೆ ಭಾರತ ಸರಕಾರ ಕೇಳಿರುವುದು ಸರಿಯಲ್ಲ ಎಂದಿದೆ.
2006ರಲ್ಲಿ ಕಂಪೆನಿಯ ಒಡೆತನವನ್ನು ಕೇರ್ನ್ ಯುಕೆ ಹೋಲ್ಡಿಂಗ್ಸ್‌ನಿಂದ ಕೇರ್ನ್ ಇಂಡಿಯಾಕ್ಕೆ ವರ್ಗಾಯಿಸುವಾಗ ಕಡಿಮೆ ಅವಧಿಯಲ್ಲಿ ಗಳಿಸಿದ ಲಾಭಕ್ಕೆ ತೆರಿಗೆ ಪಾವತಿಸುವಂತೆ ಭಾರತ ಸರಕಾರ ಕಂಪೆನಿಗೆ ಸೂಚಿಸಿತ್ತು.
ಭಾರತದ ತೆರಿಗೆ ಬೇಡಿಕೆಯು, ಭಾರತ-ಬ್ರಿಟನ್ ದ್ವಿಪಕ್ಷೀಯ ಹೂಡಿಕೆ ರಕ್ಷಣೆ ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂದು ಅಂತರ್‌ರಾಷ್ಟ್ರೀಯ ನ್ಯಾಯಮಂಡಳಿ ತೀರ್ಪು ನೀಡಿದೆ ಹಾಗೂ ತೈಲ ಕಂಪೆನಿಗೆ ಪರಿಹಾರವಾಗಿ 8,000 ಕೋಟಿ ರೂಪಾಯಿಯನ್ನು ಪಾವತಿಸುವಂತೆಯೂ ಸೂಚಿಸಿದೆ.
2014 ಜನವರಿಯಲ್ಲಿ, 10,247 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯು ಬ್ರಿಟನ್ ಕಂಪೆನಿಗೆ ಸೂಚಿಸಿತ್ತು. ಇದರ ವಿರುದ್ಧ ಕಂಪೆನಿಯು 2015ರಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು.







