ಭಾರತದ ಪ್ರಗತಿಯ ಮಾದರಿ ಬಡತನವನ್ನು ಸಾಕಷ್ಟು ವೇಗವಾಗಿ ನಿರ್ಮೂಲನಗೊಳಿಸಿಲ್ಲ: ಅರುಣ್ ಮೈರಾ
ಐಫೋನ್ ಘಟಕದ ಹಿಂಸಾಚಾರ

ಹೊಸದಿಲ್ಲಿ, ಡಿ. 23: ಐ ಫೋನ್ ಘಟಕದ ಹಿಂಸಾಚಾರ ಭಾರತದ ಪ್ರಗತಿಯ ಮಾದರಿ ಬಡತನವನ್ನು ಸಾಕಷ್ಟು ವೇಗವಾಗಿ ನಿರ್ಮೂಲನಗೊಳಿಸಿಲ್ಲ ಎಂಬುದನ್ನು ತೋರಿಸಿದೆ ಎಂದು ಯೋಜನಾ ಆಯೋಗದ ಮಾಜಿ ಸದಸ್ಯ ಅರುಣ್ ಮೈರಾ ಹೇಳಿದ್ದಾರೆ.
ಆರೆಸ್ಸೆಸ್‌ನ ಅಂಗ ಸಂಸ್ಥೆಯಾಗಿರುವ ದತ್ತೋಪಂಥ್ ಥೆಂಗಾಡಿ ಫೌಂಡೇಶನ್ ಬುಧವಾರ ಆಯೋಜಿಸಿದ್ದ ‘‘ಗ್ಲೋಬಲ್ ವೇಜ್ ರಿಪೋರ್ಟ್ 2020: ಮಿಟಿಗೇಶನ್ ಆಫ್ ಸೋಷಿಯೋ-ಪೊಲಿಟಿಕಲ್ ಆ್ಯಂಡ್ ಇಕಾನಮಿಕ್ ಇಂಪ್ಯಾಕ್ಟ್ಸ್ ಆಫ್ ರೈಸಿಂಗ್ ಇನ್ ಇಕ್ವಾಲಿಟಿ ಥ್ರೂ ವೇಜ್ ಸಬ್ಸಿಡಿ’’ ವಿಷಯದ ಚರ್ಚೆಯ ಒಂದು ಭಾಗವಾಗಿ ಅವರು ಮಾತನಾಡಿದರು.
ಅಧಿಕಾರಕ್ಕೆ ಸಂಬಂಧಿಸಿ ಇಂದು ಪ್ರತಿಯೊಬ್ಬರ ಮುಂದೆ ಒಂದು ಮೂಲಭೂತ ಪ್ರಶ್ನೆ ಇದೆ. ಅದು ನೀವು ಅಧಿಕಾರ ರಹಿತರೊಂದಿಗೆ ಇರುತ್ತೀರಾ ? ಅಥವಾ ಇಲ್ಲವೇ ? ಎಂಬುದು ಎಂದು ಅವರು ಹೇಳಿದರು. ಕನಿಷ್ಠ ಕೂಲಿ ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯಂತಹ ವಿಷಯಗಳನ್ನು ಒಂದು ವೇಳೆ ಜನರು ಹಾಗೂ ಸಂಘಟನೆಗಳು ನಿಷ್ಪಕ್ಷಪಾತವಾಗಿ ನೋಡಿದರೆ ಹಾಗೂ ಅಧಿಕಾರ ರಹಿತರಿಗೆ ಬೆಂಬಲ ನೀಡಿದರೆ, ಜನರು ನಮ್ಮನ್ನು ಸಿಲುಕಿಸಲು ಪ್ರಯತ್ನಿಸುತ್ತಾರೆ. ನೀವು ರಾಜಕೀಯ ಪಕ್ಷವನ್ನು ಬೆಂಬಲಿಸುತ್ತೀರಿ ಎಂದು ಜನರು ಹೇಳುತ್ತಾರೆ. ಆದರೆ, ನಮ್ಮಲ್ಲ ಶಕ್ತಿಯನ್ನು ಒಗ್ಗೂಡಿಸುವ ಹಾಗೂ ಅಧಿಕಾರ ರಹಿತರನ್ನು ಸಮಷ್ಠಿಯಾಗಿ ಪ್ರತಿನಿಧಿಸುವ ಕಾಲವೊಂದು ಎಲ್ಲರಿಗೂ ಬಂದಿದೆ ಎಂದು ಅವರು ಹೇಳಿದರು.
ಸುತ್ತಮುತ್ತ ಹಾಗೂ ನಮ್ಮೊಳಗೆ ನೋಡಿಕೊಳ್ಳುವ ಕಾಲ ಎಲ್ಲ ಸಂಘಟನೆಗಳ ನಾಯಕರಿಗೆ ಬಂದಿದೆ ಎಂದು ಹೇಳಿದ ಬೂಸ್ಟನ್ ಕನ್ಸಲ್ಟೆಂಗ್ ಸಮೂಹದ ಭಾರತದ ಮಾಜಿ ಅಧ್ಯಕ್ಷರೂ ಆಗಿದ್ದ ಮೈರಾ, ರೈತರು ನ್ಯಾಯೋಚಿತ ಬೆಲೆ ಪಡೆಯಲು, ದಲಿತರನ್ನು ಒಳಗೊಳಿಸಲು ನ್ಯಾಯೋಚಿತ ಆರ್ಥಿಕತೆಯನ್ನು ರೂಪಿಸಲು ನಾವು ದೊಡ್ಡ ರೀತಿಯಲ್ಲಿ ಪ್ರಜಾಸತ್ತಾತ್ಮಕ ಚಳವಳಿಯನ್ನು ಕಟ್ಟುವ ಅಗತ್ಯ ಇದೆ ಎಂದರು. ಕಾಯ್ದೆ ಒಳ್ಳೆಯದೇ ಕೆಟ್ಟದೇ ಎಂಬ ಬಗ್ಗೆ ಸಂಬಂಧಿತರು ಹಾಗೂ ಪ್ರತಿಯೊಂದು ಹೃದಯವೂ ನಿರ್ಧರಿಸಬೇಕು. ಅಲ್ಲದೆ, ವ್ಯವಸ್ಥೆಯ ಒಂದು ಭಾಗವಾದ ಎಲ್ಲ ಜನರನ್ನು ಧ್ವನಿಯನ್ನು ಇಂದಿನ ಸರಕಾರ ಆಲಿಸುವ ಅಗತ್ಯ ಇದೆ ಎಂದರು.
ಕೊರೋನಾ ಸಾಂಕ್ರಾಮಿಕ ರೋಗದ ಆಘಾತದಿಂದ ಭಾರತ ಚೇತರಿಸಿಕೊಳ್ಳುತ್ತಿರುವ ಬಗ್ಗೆ ಮಾತನಾಡಿದ ಮೈರಾ, ದೇಶ ಸಾಂಕ್ರಾಮಿಕ ರೋಗದ ಹಿಂದಿನ ಮಾದರಿಯಲ್ಲಿ ಅಭಿವೃದ್ಧಿ ಹೊಂದಲು ಬಯಸುತ್ತಿದೆಯೇ ಅಥವಾ ಅದು ವಿಭಿನ್ನ ಮಾದರಿಯನ್ನು ಒಟ್ಟಾಗಿ ಅನುಸರಿಸಲು ಬಯಸುತ್ತಿದೆಯೇ ಎಂಬ ಬಗ್ಗೆ ದೇಶ ನಿರ್ಧರಿಸಬೇಕು ಎಂದರು. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿ ಮುಂದುವರಿಯುವುದನ್ನು ನಾವು ಬಯಸಲಾರೆವು. ಯಾಕೆಂದರೆ, ಲಕ್ಷಾಂತರ ಜನರು ಕಡು ಬಡತನದಲ್ಲಿ ಜೀವಿಸುತ್ತಿದ್ದಾರೆ. ಬಡತನವನ್ನು ಅಷ್ಟು ಸುಲಭವಾಗಿ ನಿರ್ಮೂಲನಗೊಳಿಸಲು ಸಾಧ್ಯವಿಲ್ಲ ಎಂದು ಮೈರಾ ಹೇಳಿದರು.
ಇದಕ್ಕೆ ಕರ್ನಾಟಕದಲ್ಲಿರುವ ಆ್ಯಪಲ್‌ನ ವಿಸ್ಟ್ರನ್ ಘಟಕದಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, ಆ್ಯಪಲ್‌ನ ಜಾಗತಿಕ ಪೂರೈಕೆ ಸರಪಣಿಗೆ ಸಂಪರ್ಕ ಹೊಂದಿದ ಉತ್ಪಾದನಾ ಘಟಕದಲ್ಲಿ ಸುಮಾರು 10 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಈ ಘಟಕಕ್ಕೆ ದೊಡ್ಡ ಮೊತ್ತದ ಎಫ್‌ಡಿಐ ಹೂಡಿಕೆ ಮಾಡಲಾಗಿದೆ. ಆದರೆ, ಈ ಘಟಕದ ಒಟ್ಟು ಉದ್ಯೋಗಿಗಳಲ್ಲಿ ಒಂದು ಗುಂಪಿನ ಉದ್ಯೋಗಿಗಳು ಮಾತ್ರ ಖಾಯಂ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದವರು ಯಾವುದೇ ರೀತಿಯ ಸೌಲಭ್ಯವನ್ನು ಪಡೆಯುತ್ತಿಲ್ಲ. ಇದು ನಾವು ಎದುರು ನೋಡುತ್ತಿರುವ ಮಾದರಿಯೇ ? ಅವರು ಕೂಡ ಸೌಲಭ್ಯ ಪಡೆಯಬೇಕಿದೆ. ಈ ಬಗ್ಗೆ ನಾವು ನಮ್ಮನ್ನೇ ಪ್ರಶ್ನಿಸಬೇಕಾದ ಅಗತ್ಯ ಇದೆ ಎಂದು ಮೈರಾ ಹೇಳಿದರು.







