ಕೇಂದ್ರದ ಮಾತುಕತೆ ಆಹ್ವಾನವನ್ನು ಮತ್ತೊಮ್ಮೆ ತಿರಸ್ಕರಿಸಿದ ಸಂಯುಕ್ತ ಕಿಸಾನ್ ಮೋರ್ಚಾ

ಹೊಸದಿಲ್ಲಿ, ಡಿ. 23: ಮಾತುಕತೆಯನ್ನು ಪುನರಾರಂಭಿಸುವ ಕೇಂದ್ರ ಸರಕಾರದ ಇತ್ತೀಚೆಗಿನ ಆಹ್ವಾನವನ್ನು ರೈತರ ಒಕ್ಕೂಟಗಳ ಜಂಟಿ ಸಂಘ ಸಂಯುಕ್ತ ಕಿಸಾನ್ ಮೋರ್ಚಾ ಬುಧವಾರ ತಿರಸ್ಕರಿಸಿದೆ. ನಾವು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಕೋರಿದ್ದೇವೆ. ಅದಕ್ಕೆ ತಿದ್ದುಪಡಿ ತರಲು ಕೋರಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಹೇಳಿದ್ದಾರೆ.
ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವರಾಜ್ ಇಂಡಿಯಾದ ರಾಷ್ಟ್ರಾಧ್ಯಕ್ಷ ಯೋಗೇಂದ್ರ ಯಾದವ್, ರೈತರು ಮಾತುಕತೆ ಸಿದ್ದ. ಆದರೆ, ಸರಕಾರದ ಗಟ್ಟಿ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ. ಈಗಾಗಲೇ ತಿರಸ್ಕೃತ ಪ್ರಸ್ತಾವವನ್ನು ಪುನಾರಾವರ್ತಿಸದಿರಿ ಎಂದರು. ಸರಕಾರದ ಮಾತುಕತೆಯ ಆಹ್ವಾನಕ್ಕೆ ಪ್ರತಿಕ್ರಿಯೆಯಾಗಿ ಸಂಯುಕ್ತ ಕಿಸಾನ್ ಮೋರ್ಚಾ, ಕೇಂದ್ರ ಕೃಷಿ ಸಚಿವಾಲಯಕ್ಕೆ ಬರೆದ ಪತ್ರವನ್ನು ಅವರು ಓದಿದರು. ಸರಕಾರ ರೈತರನ್ನು ರಾಜಕೀಯ ವಿರೋಧಿಗಳಂತೆ ನಡೆಸಿಕೊಳ್ಳುತ್ತಿದೆ.
ನಿಜವಾದ ಕಾಳಜಿ ಇರುವ ಈ ದೇಶದ ಪ್ರಜೆಗಳಂತೆ ನಡೆಸಿಕೊಳ್ಳುತ್ತಿಲ್ಲ. ಮುಕ್ತ ಮನಸ್ಸಿನಿಂದ, ತೆರೆದ ಹೃದಯದಿಂದ ಹಾಗೂ ಪ್ರಾಮಾಣಿಕ ಉದ್ದೇಶದಿಂದ ಸರಕಾರ ರೈತರನ್ನು ಮಾತುಕತೆಗೆ ಆಹ್ವಾನಿಸಬೇಕು ಎಂದು ಅವರು ಹೇಳಿದರು. ಭಾರತೀಯ ಕಿಸಾನ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯದುವೀರ್ ಸಿಂಗ್ ಮಾತನಾಡಿ, ಕೇಂದ್ರ ಸರಕಾರ ಪ್ರತಿಭಟನೆಯನ್ನು ಲಘುವಾಗಿ ಪರಿಗಣಿಸಿದೆ. ಅಲ್ಲದೆ, ಅದು ಬೆಂಕಿಯೊಂದಿಗೆ ಸರಸವಾಡುತ್ತಿದೆ. ದೇಶದ ಸುಮಾರು ಶೇ. 60 ಜನಸಂಖ್ಯೆಯನ್ನು ರೈತರು ಪ್ರತಿನಿಧಿಸುತ್ತಾರೆ. ಸರಕಾರ ರೈತರನ್ನು ಅಹವಾಲುಗಳನ್ನು ಆಲಿಸಬೇಕು ಎಂದರು. ತಮ್ಮ ಕಳವಳಕ್ಕೆ ಪರಿಹಾರ ಪಡೆಯಲು ಮಾತುಕತೆಗೆ ರೈತರು ಎಲ್ಲ ದಾರಿಯಿಂದಲೂ ದಿಲ್ಲಿಗೆ ಆಗಮಿಸಿದರು ಎಂದು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮೊಲ್ಲಾಹ್ ಹೇಳಿದ್ದಾರೆ.







