ಮಾದವ್ ಗಾಡ್ಗಿಳ್, ಕಸ್ತೂರಿ ರಂಗನ್ ವರದಿಗಳು ಕಾಂಗ್ರೆಸ್ ಪಾಪದ ಕೂಸು: ಸಿ.ಟಿ.ರವಿ

ಚಿಕ್ಕಮಗಳೂರು, ಡಿ.23: ಗಾಡ್ಗೀಳ್ ವರದಿ ಹಾಗೂ ಕಸ್ತೂರಿ ರಂಗನ್ ವರದಿ ಕಾಂಗ್ರೆಸ್ ಸರಕಾರ ಪಾಪದ ಕೂಸಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ವರದಿಯನ್ನು ಏಕೆ ಸರಿಪಡಿಸಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿ ಪ್ರಕಾರ ಸಾಂಸ್ಕೃತಿಕ ಪ್ರದೇಶ, ಜನಜೀವನ, ಕೃಷಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ. ಅದನ್ನು ಈಗಾಗಲೇ ಸರಕಾರ ಸ್ಪಷ್ಟಪಡಿಸಿದೆ. 50 ವರ್ಷದ ಹಿಂದಿನ ಜನರ ಮಾನಸಿಕತೆ ಇಂದು ಇದೆ ಎಂದು ಹೇಳಲು ಸಾಧ್ಯವಿಲ್ಲ, ಮನುಷ್ಯ ಇಂದು ಸ್ವಾರ್ಥಿಯಾಗಿದ್ದಾನೆ. ನೈಸರ್ಗಿಕ ಪ್ರದೇಶವನ್ನು ಕಾನೂನು ಮೂಲಕ ರಕ್ಷಣೆ ಮಾಡಲೇಬೇಕು ಎಂದರು.
ಕಸ್ತೂರಿ ರಂಗನ್ ವರದಿ ವಿರುದ್ಧ ಕಾಂಗ್ರೆಸ್ ಮುಖಂಡರು ಯಾವ ಮುಖ ಇಟ್ಟುಕೊಂಡು ಹೋರಾಟಕ್ಕೆ ಇಳಿದಿದ್ದಾರೆ ಅರ್ಥವಾಗುತ್ತಿಲ್ಲ. ಗಾಡ್ಗಿಳ್ ವರದಿ ಕಾಂಗ್ರೆಸ್ ಕೂಸು. ಕಸ್ತೂರಿ ರಂಗನ್ ಕೂಡ ಕಾಂಗ್ರೆಸ್‍ನದ್ದೇ ಕೂಸು. ಅವರು ಅಧಿಕಾರದಲ್ಲಿದ್ದಾಗ ತದ್ವಿರುದ್ಧವಾದ ಪ್ರಮಾಣಪತ್ರ ಸಲ್ಲಿಸಿ ಈಗ ಅದನ್ನು ಸರಿಮಾಡಲು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಅವತ್ತು ಸರಿಮಾಡಿದ್ದರೆ ಇವತ್ತು ಒತ್ತಡ ಹೇರುವ ಪ್ರಶ್ನೆಯೇ ಬರುತ್ತಿರಲಿಲ್ಲ ಎಂದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ವರದಿಯಲ್ಲಿರುವ ಸಾಂಸ್ಕೃತಿಕ ವಲಯವನ್ನು ಕೈಬಿಟ್ಟು ವರದಿ ಜಾರಿಗೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದೇವೆ. ಜನಾಭಿಪ್ರಾಯ ಸಂಗ್ರಹಿಸಿಲ್ಲ ಎಂದು ಹೇಳುತ್ತಾರೆ. 2013ರಿಂದ 19ರವರೆಗೂ ಯಾವ ಪಕ್ಷ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಏಕೆ ಗ್ರಾ.ಪಂ. ಅಹವಾಲು ಸ್ವೀಕಾರ ಮಾಡಲಿಲ್ಲ, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕಾಂಗ್ರೆಸ್‍ನವರೇ ನೀಡಬೇಕು ಎಂದರು.
ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರಲಿದೆ. ಅದೇ ರೀತಿ ಜಿಲ್ಲೆಯಲ್ಲಿ ಗೆದ್ದು ಬರಲಿದ್ದಾರೆ. ಇದಕ್ಕೆ ಈ ಹಿಂದಿನ ಚುನಾವಣೆಗಳು ಸಾಕ್ಷಿಯಾಗಿವೆ. ಕೇಂದ್ರ ಸರಕಾರ ಗ್ರಾ.ಪಂ.ಗಳಿಗೆ ಅತೀ ಹೆಚ್ಚಿನ ಅನುದಾನ ನೀಡಿದೆ. 1ರಿಂದ 5ಕೋಟಿ ರೂ. ಅನುದಾನ ಸಿಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಸಾಕಾರಗೊಳಿಸಬೇಕಿದೆ ಎಂದರು.
ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನ ಪ್ರಸ್ತಾವ ಪಕ್ಷದ ಮುಂದೇ ಇಲ್ಲ. ಅದರ ಆವಶ್ಯಕತೆಯೂ ಇಲ್ಲ. ಈ ರೀತಿ ಮಾತನಾಡುವುದರಿಂದ ಹಿರಿಯರಾಗಿರುವ ದೇವೇಗೌಡರ ಮನಸ್ಸಿಗೆ ಘಾಸಿಯಾಗುತ್ತದೆ. ಅನಗತ್ಯ ಚರ್ಚೆ ಬೇಡ. ದೇಶದ ಪ್ರಶ್ನೆ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ನಿಲ್ಲಬೇಕು. ನಮ್ಮ ನಮ್ಮ ರಾಜಕೀಯ ಭಿನ್ನಾಭಿಪ್ರಾಯ ಬಂದಾಗ ಎದುರು ಬದುರಾಗಿ ನಿಲ್ಲಬೇಕು. ಕೆಲವು ಪಕ್ಷಗಳು ದೇಶದ ಪ್ರಶ್ನೆ ಬಂದಾಗಲೂ ಎದುರಾಗಿ ರಾಜಕೀಯಕ್ಕೆ ನಿಂತು ಬಿಡುತ್ತವೆ. ಸಮುದಾಯದ ಹಿತ ಮತ್ತು ದೇಶದ ಹಿತ ಬಂದಾಗ ನಮ್ಮ ಜೊತೆ ನಿಂತುಕೊಳ್ಳಲಿ, ಅದು ಬಿಟ್ಟರೆ ವಿಲೀನದ ಆವಶ್ಯಕತೆ ಅವರಿಗೂ ಇಲ್ಲ ನಮಗೂ ಇಲ್ಲ. ಜೆಡಿಎಸ್‍ನವರು ವಿಷಯಾಧಾರಿತ ಬೆಂಬಲ ನೀಡುತ್ತೇವೆ ಎಂದಿರುವ ನಿಲುವು ಸ್ವಾಗತಿಸುತ್ತೇನೆ.
- ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ







