ಎಚ್‍ಎಎಲ್, ಬಿಇಎಲ್ ಕಾರ್ಮಿಕರ ಡಿಎ ತಡೆ ಹಿಡಿದ ಆಡಳಿತ ಮಂಡಳಿಗಳು: ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು, ಡಿ.23: ಕಾರ್ಮಿಕರ ತುಟ್ಟಿಭತ್ತೆ(ಡಿಎ) ತಡೆಹಿಡಿದಿದ್ದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ಹಾಗೂ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‍ಎಎಲ್)ನ ಆದೇಶಗಳಿಗೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ.
ಬಿಇಎಲ್ ಹಾಗೂ ಎಚ್‍ಎಎಲ್ ಕಾರ್ಮಿಕರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಈ ತಡೆ ನೀಡಿದೆ. ಅಲ್ಲದೇ, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಇಲಾಖೆ, ಎಚ್‍ಎಎಲ್ ಮತ್ತು ಬಿಇಎಲ್ ಆಡಳಿತ ಮಂಡಳಿಗಳಿಗೆ ನೋಟಿಸ್ ಜಾರಿ ಮಾಡಿದೆ.
2020ರ ಜನವರಿ 1ರಿಂದ ಈವರೆಗಿನ ತುಟ್ಟಿಭತ್ಯೆಯನ್ನು 2021ರ ಜನವರಿಯಿಂದ ಮಾರ್ಚ್ ಒಳಗೆ ಉದ್ಯೋಗಿಗಳಿಗೆ ನೀಡಬೇಕಿತ್ತು. ಆದರೆ, ಈ ಮೊತ್ತವನ್ನು ತಡೆ ಹಿಡಿದಿರುವುದಾಗಿ ಆಡಳಿತ ಮಂಡಳಿಗಳು ತಿಳಿಸಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಸಂಘಗಳು ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿವೆ.
ವಿಚಾರಣೆ ವೇಳೆ ಸರಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಈ ನಿಯಮವು ಕಾರ್ಯನಿರ್ವಾಹಕ ಹುದ್ದೆಯಲ್ಲಿರುವ ಅಧಿಕಾರಿಗಳು ಹಾಗೂ ಅಸಂಘಟಿತ ಸೂಪರ್‍ವೈಸರ್ ಗಳಿಗೆ ಮಾತ್ರ ಅನ್ವಯಿಸುತ್ತಿದೆ. ಕಾರ್ಮಿಕರಿಗೆ ಅನ್ವಯಿಸುವುದಿಲ್ಲ ಎಂದು ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ ಎಂದರು.







