ಟ್ರಾವೆಲ್ ಏಜೆನ್ಸಿಗಳಿಂದ ಬಾಡಿಗೆಗೆ ಪಡೆದ ವಾಹನಗಳ ಮಾರಾಟ ಪ್ರಕರಣ: ಐವರ ಬಂಧನ

ಬೆಂಗಳೂರು, ಡಿ.23: ಟ್ರಾವೆಲ್ ಏಜೆನ್ಸಿಗಳಿಂದ ವಾಹನಗಳನ್ನು ಬಾಡಿಗೆಗೆ ಪಡೆದು ಮಾರಾಟ ಮಾಡುತ್ತಿದ್ದ ಆರೋಪದಡಿ ಐವರನ್ನು ಇಲ್ಲಿನ ಯಶವಂತಪುರ ಠಾಣಾ ಪೊಲೀಸರು ಬಂಧಿಸಿ, 32 ಲಕ್ಷ ರೂ.ಬೆಲೆಬಾಳುವ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ತೇಗೂರಿನ ಆರೀಫ್(26), ಅದೇ ಜಿಲ್ಲೆಯ ಬಸವ ಕಾಲನಿಯ ಕೌಸ್ತುಭ(32), ಚಂದ್ರಲೇಔಟ್ 1ನೇ ಹಂತದ ಅಮರ್(26), ಎಸ್.ಪಾಷ(23), ಚಾಮರಾಜಪೇಟೆಯ ತೌಸೀಫ್(26) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ದೂರುದಾರ ಗಿರೀಶ್ ಎಂಬವರು ವ್ಯವಹಾರ ಸಂಬಂಧ ಬೆಳಗಾವಿಗೆ ಹೋಗಿ ಬರುತ್ತಿದ್ದಾಗ ಅವರಿಗೆ ಆರೋಪಿಗಳಾದ ಆರೀಫ್ ಮತ್ತು ಕೌಸ್ತುಭ ಎಂಬವರ ಪರಿಚಯವಾಗಿತ್ತು. ಅವರು ಹಳೆಯ ವಾಹನಗಳು ಇದ್ದರೆ ತೆಗೆದುಕೊಳ್ಳುತ್ತೇವೆ ಎಂದು ಗಿರೀಶ್ ಅವರಿಗೆ ತಿಳಿಸಿದ್ದರು.
ಡಿ.20ರಂದು ಆರೀಫ್ ಮತ್ತು ಕೌಸ್ತುಭ ಅವರು ಗಿರೀಶ್ ಅವರಿಗೆ ಫಾರ್ಚೂನರ್ ವಾಹನ 5 ಲಕ್ಷಕ್ಕೆ ಮಾರಾಟಕ್ಕಿದೆ. ಅದರ ದಾಖಲಾತಿಗಳು ಬೆಳಗಾವಿಯಲ್ಲಿವೆ ಎಂದು ಹೇಳಿ 5000 ರೂ. ಮುಂಗಡವಾಗಿ ಹಣ ಪಡೆದುಕೊಂಡು ಹೋಗಿದ್ದರು.
ನಂತರ ಫಾರ್ಚೂನರ್ ವಾಹನವನ್ನು ದೂರುದಾರ ಗಿರೀಶ್ ಅವರ ಮತ್ತಿಕೆರೆ ಅಂಗಡಿಯ ಬಳಿ ತಂದು ಪರಿಶೀಲಿಸಿ ನೋಡುವಂತೆ ಹೇಳಿದ್ದಾರೆ. ಅದರಂತೆ ಗಿರೀಶ್ ಅವರು ದಾಖಲಾತಿಯನ್ನು ಪರಿಶೀಲಿಸಿದಾಗ ವಾಹನ ನೋಂದಣಿ ಸಂಖ್ಯೆ ನಕಲಿಯಾಗಿರುವುದು ಕಂಡುಬಂದಿದೆ. ಈ ಬಗ್ಗೆ ಆರೀಫ್ ಮತ್ತು ಕೌಸ್ತುಭ ಅವರನ್ನು ಕೇಳಿದಾಗ, ಈ ಬಗ್ಗೆ ನಾವು ಜವಾಬ್ದಾರರು, ಎಂದು ಹೇಳಿ ಹಣ ಪಡೆದು ಪರಾರಿಯಾಗಿದ್ದಾರೆ.
5000 ರೂ. ಹಣ ಪಡೆದುಕೊಂಡು ಮೋಸ ಹೋದ ಬಗ್ಗೆ ಗಿರೀಶ್ ಅವರು ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆರೋಪಿಗಳು ಗೋವಾ ರಾಜ್ಯಕ್ಕೆ ಪ್ರವಾಸ ಹೋಗಿದ್ದಾಗ ಸ್ಥಳೀಯ ಟ್ರಾವೆಲ್ಸ್ ನಿಂದ ಪಾರ್ಚೂನರ್ ಕಾರನ್ನು ಬಾಡಿಗೆಗೆ ಪಡೆದುಕೊಂಡು ಅದನ್ನು ಬೆಳಗಾವಿಗೆ ತಂದು ಅದರ ನೋಂದಣಿ ಸಂಖ್ಯೆಯನ್ನು ಬದಲಾವಣೆ ಮಾಡಿ ಮಾರಾಟ ಮಾಡಲು ಯತ್ನಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು.







