ಪ್ರಗ್ಯಾನ್ ಓಜಾ ಐಪಿಎಲ್ ಆಡಳಿತ ಮಂಡಳಿಗೆ ನಾಮ ನಿರ್ದೇಶನ

ಪ್ರಗ್ಯಾನ್ ಓಜಾ
ಮುಂಬೈ: ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಾರ್ಷಿಕ ಸಾಮಾನ್ಯ ಸಭೆಯ ಪೂರ್ವಭಾವಿಯಾಗಿ ಭಾರತದ ಕ್ರಿಕೆಟಿಗರ ಸಂಘ(ಐಸಿಎ) ಭಾರತದ ಮಾಜಿ ಎಡಗೈ ಸ್ಪಿನ್ನರ್ ಪ್ರಜ್ಞಾನ್ ಓಜಾ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಮಂಡಳಿಗೆ ಪ್ರತಿನಿಧಿಯಾಗಿ ನಾಮನಿರ್ದೇಶನ ಮಾಡಿದೆ.
ಬಿಸಿಸಿಐ ಸಂವಿಧಾನದ ಪ್ರಕಾರ ಐಪಿಎಲ್ ಆಡಳಿತ ಮಂಡಳಿಗೆ ಬಿಸಿಎ ಸದಸ್ಯರನ್ನು ನಾಮನಿರ್ದೇಶನ ಮಾಡಬೇಕಾಗಿದೆ ಮತ್ತು ಕಳೆದ ವರ್ಷ ಈ ಸಂಘವನ್ನು ಭಾರತದ ಮಾಜಿ ಅಂತರ್ರಾಷ್ಟ್ರೀಯ ಆಟಗಾರ ಸುರಿಂದರ್ ಖನ್ನಾ ಪ್ರತಿನಿಧಿಸಿದ್ದರು.
‘‘ಡಿಸೆಂಬರ್ 19, 2020 ರಂದು ನಡೆದ ಐಸಿಎ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರು ಐಪಿಎಲ್ ಆಡಳಿತ ಮಂಡಳಿ ಮತ್ತು ಐಸಿಎ ಮಂಡಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲು ನಿರ್ದೇಶಕರ ಮಂಡಳಿಗೆ ಅಧಿಕಾರ ನೀಡಿದ್ದರು. ಅದರಂತೆ ಬಿಸಿಎ ಓಜಾ ಅವರನ್ನು ನಾಮನಿರ್ದೇಶನ ಮಾಡಿದೆ ’’ಎಂದು ಐಸಿಎ ಪ್ರಕಟನೆಯಲ್ಲಿ ತಿಳಿಸಿದೆ.
ಓಜಾ ಜೊತೆಗೆ ಬ್ರಿಜೇಶ್ ಪಟೇಲ್ ಮತ್ತು ಖೈರುಲ್ ಜಮಾಲ್ ಮಜುಂದಾರ್ ಅವರು ಆಡಳಿತ ಮಂಡಳಿಯ ಇತರ ಸದಸ್ಯರಾಗಲಿದ್ದಾರೆ. ಕಳೆದ ವರ್ಷ, ಪಟೇಲ್ ಮತ್ತು ಮಜುಂದಾರ್ ಇಬ್ಬರನ್ನು ಬಿಸಿಸಿಐ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತ್ತು. ಈ ಬಾರಿಯೂ ಅವರು ಅವಿರೋಧವಾಗಿ ಮತ್ತೊಂದು ಅವಧಿಯನ್ನು ಪಡೆಯಲು ಸಿದ್ಧರಾಗಿದ್ದಾರೆ.
34ರ ಹರೆಯದ ಓಜಾ - 24 ಟೆಸ್ಟ್, 18 ಏಕದಿನ ಮತ್ತು ಆರು ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. ಅವರು ಈ ವರ್ಷದ ಫೆಬ್ರವರಿಯಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದಲೂ ನಿವೃತ್ತರಾದರು. ಅಂತರ್ರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರು ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು.







