ಯುವತಿಯ ಕತ್ತುಹಿಸುಕಿ ಕೊಂದು, ಮೃತದೇಹ ಸುಟ್ಟುಹಾಕಿದ ಮಾಜಿ ಪ್ರಿಯಕರ
ಇಬ್ಬರನ್ನು ಬಂಧಿಸಿದ ಪೊಲೀಸರು

ಹೈದರಾಬಾದ್: ಧರ್ಮಾವರಂನ ಬ್ಯಾಂಕೊಂದರಲ್ಲಿ ಅರೆಕಾಲಿಕ ಉದ್ಯೋಗದಲ್ಲಿದ್ದ 19ರ ಹರೆಯದ ಯುವತಿಯೋರ್ವಳನ್ನು ಆಕೆಯ ಮಾಜಿ ಪ್ರಿಯಕರ ಕೊಲೆಗೈದು ಸುಟ್ಟು ಹಾಕಿದ ಘಟನೆಯು ನಡೆದಿದೆ. ಯುವತಿಯು ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದು, ಡಿ.22ರಂದು ಆಕೆಯ ಮೃತದೇಹವು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
18ರ ಹರೆಯದ ಸ್ನೇಹಲತಾಳ ಮೃತದೇಹವು ಬುಧವಾರ ಜಿಲ್ಲೆಯ ಬದನ್‌ಪಲ್ಲಿ ಗ್ರಾಮದ ಧರ್ಮಾವರಂ-ಅನಂತಪುರಂ ರೋಡ್ ಸಮೀಪದ ಗದ್ದೆಯೊಂದರಲ್ಲಿ ಪತ್ತೆಯಾಗಿತ್ತು.
ಆರೋಪಿ ರಾಜೇಶ್ ಎಂಬಾತ ಸ್ನೇಹಲತಾಳೊಂದಿಗೆ ಮಾತನಾಡಲು ಏಕಾಂತ ಸ್ಥಳಕ್ಕೆ ಬರುವಂತೆ ಹೇಳಿದ್ದಾನೆ. ಬಳಿಕ ಆಕೆಯ ಕತ್ತುಹಿಸುಕಿ ಕೊಂದಿದ್ದು, ಸಾಕ್ಷಿಯನ್ನು ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಧರ್ಮಾವರಂ ಪೊಲೀಸರು ಪ್ರಕರಣದ ತನಿಖೆಯ ವೇಳೆ ಬಹಿರಂಗಪಡಿಸಿದ್ದಾರೆ. ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಸ್ನೇಹಲತಾ ಅವರ ತಾಯಿ ಮಗಳು ನಾಪತ್ತೆಯಾಗಿದ್ದಾಗಿ ಧರ್ಮಾವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬುಧವಾರ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಬಳಿಕ ಇದನ್ನು ಸ್ನೇಹಲತಾ ಅವರ ಮೃತದೇಹವೆಂದು ಗುರುತಿಸಲಾಗಿತ್ತು.
ಸಂತ್ರಸ್ತೆ ಪರಿಶಿಷ್ಟ ಜಾತಿ(ಎಸ್‌ಸಿ) ಸಮುದಾಯಕ್ಕೆ ಸೇರಿದವರಾಗಿದ್ದು, ಆರೋಪಿಗಳ ವಿರುದ್ಧ ಎಸ್‌ಸಿ ಹಾಗೂ ಬುಡಕಟ್ಟು(ದೌರ್ಜನ್ಯ ತಡೆ) ಕಾಯ್ದೆಯಲ್ಲದೆ ಐಪಿಸಿ 302(ಕೊಲೆ), 201(ಅಪರಾಧದ ಸಾಕ್ಷನಾಶ)ಸಹಿತ ಇತರ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







