ಪಶ್ಚಿಮಬಂಗಾಳ ಚುನಾವಣೆ: ಎಡಪಕ್ಷಗಳೊಂದಿಗಿನ ಮೈತ್ರಿ ಅಂತಿಮಗೊಳಿಸಿದ ಕಾಂಗ್ರೆಸ್

ಕೋಲ್ಕತಾ: ಪಶ್ಚಿಮಬಂಗಾಳದಲ್ಲಿ ನಡೆಯಲಿರುವ ಮುಂಬರುವ ವಿಧಾನಸಭಾ ಚುನಾವಣೆಗೆ ಎಡಪಕ್ಷಗಳೊಂದಿಗಿನ ಚುನಾವಣಾ ಮೈತ್ರಿಗೆ ಕಾಂಗ್ರೆಸ್ ಪಕ್ಷ ಗುರುವಾರ ವಿಧ್ಯುಕ್ತವಾಗಿ ಅನುಮೋದನೆ ನೀಡಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ ಘೋಷಿಸಿದರು.
ಪಶ್ಚಿಮಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಈ ಹಿಂದೆ ಎಡ ಪಕ್ಷಗಳೊಂದಿಗೆ ಮೈತ್ರಿ ಪರವಾಗಿ ಶಿಫಾರಸು ಮಾಡಿತ್ತು.
ರಾಜ್ಯ ಚುನಾವಣೆಯಲ್ಲಿ ಎಡಪಕ್ಷಗಳು ಕೂಡ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಒಲವು ವ್ಯಕ್ತಪಡಿಸಿದ್ದವು.
“ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಗೆ ಎಡ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿಗೆ ಕಾಂಗ್ರೆಸ್ ಹೈಕಮಾಂಡ್ ಇಂದು ಅಸ್ತು ಎಂದಿದೆ'' ಎಂದು ಚೌಧುರಿ ಟ್ವೀಟಿಸಿದ್ದಾರೆ.
ಎಡಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷ ಪಶ್ಚಿಮಬಂಗಾಳದಲ್ಲಿ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧಿಸಿರಲಿಲ್ಲ. ಕೇರಳದಲ್ಲೂ ಈ ಎರಡು ಪಕ್ಷಗಳು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದವು. ಪಶ್ಚಿಮಬಂಗಾಳ ರಾಜ್ಯ ಚುನಾವಣೆಯು ಮುಂದಿನ ವರ್ಷದ ಮಾರ್ಚ್-ಎಪ್ರಿಲ್ ಗೆ ನಡೆಯುವ ಸಾಧ್ಯತೆಯಿದೆ.





