ಮಾತುಕತೆಗಳಿಗಾಗಿ ರೈತ ನಾಯಕರಿಗೆ ಮತ್ತೊಮ್ಮೆ ಸರಕಾರದ ಆಹ್ವಾನ

ಹೊಸದಿಲ್ಲಿ,ಡಿ.24: ಪ್ರತಿಭಟನಾನಿರತ ರೈತ ಸಂಘಟನೆಗಳನ್ನು ಮಾತುಕತೆಗಳಿಗಾಗಿ ಗುರುವಾರ ಸರಕಾರವು ಮತ್ತೆ ಆಹ್ವಾನಿಸಿದೆ. ಆದರೆ ಮೂರು ನೂತನ ಕೃಷಿ ಕಾನೂನುಗಳ ವ್ಯಾಪ್ತಿಯಲ್ಲಿಲ್ಲದ,ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಸಂಬಂಧಿಸಿದ ಯಾವುದೇ ಹೊಸ ಬೇಡಿಕೆಯನ್ನು ಮಾತುಕತೆಗಳ ಕಾರ್ಯಸೂಚಿಯಲ್ಲಿ ಸೇರಿಸುವುದು ತರ್ಕಬದ್ಧವಲ್ಲ ಎಂದು ಗುರುವಾರ 40 ರೈತ ನಾಯಕರಿಗೆ ಬರೆದಿರುವ ಪತ್ರದಲ್ಲಿ ಅದು ತಿಳಿಸಿದೆ.
ಪ್ರತಿಭಟನೆಯನ್ನು ಅಂತ್ಯಗೊಳಿಸಲು ಸರಕಾರವು ಮುಕ್ತ ಮನಸ್ಸಿನಿಂದ ಮತ್ತು ಒಳ್ಳೆಯ ಉದ್ದೇಶದೊಂದಿಗೆ ಎಲ್ಲ ವಿಷಯಗಳ ಬಗ್ಗೆ ಚರ್ಚಿಸುತ್ತಿದೆ ಮತ್ತು ಅದನ್ನು ಮುಂದುವರಿಸಲಿದೆ. ದಯವಿಟ್ಟು ಮುಂದಿನ ಸುತ್ತಿನ ಮಾತುಕತೆಗಳಿಗಾಗಿ ದಿನಾಂಕ ಮತ್ತು ಸಮಯವನ್ನು ತಿಳಿಸಿ ಎಂದು ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರವಾಲ್ ಅವರು ಪತ್ರದಲ್ಲಿ ರೈತನಾಯಕರನ್ನು ಕೋರಿದ್ದಾರೆ.
ತಾವು ಚರ್ಚಿಸಲು ಬಯಸುವ ವಿಷಯಗಳ ಕುರಿತು ವಿವರಗಳನ್ನು ಒದಗಿಸುವಂತೆ ರೈತ ನಾಯಕರಿಗೆ ಸೂಚಿಸಿರುವ ಅಗರವಾಲ್,ಮಾತುಕತೆಗಳು ಸಚಿವ ಮಟ್ಟದಲ್ಲಿ ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯಲಿವೆ ಎಂದು ತಿಳಿಸಿದ್ದಾರೆ.
ಎಂಎಸ್‌ಪಿಗೂ ಕೃಷಿ ಕಾನೂನುಗಳಿಗೂ ಸಂಬಂಧವಿಲ್ಲ,ಅವು ನಿಗದಿತ ಬೆಲೆಗಳಲ್ಲಿ ಕೃಷಿ ಉತ್ಪನ್ನಗಳ ಖರೀದಿಯ ಮೇಲೆ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ ಎಂದು ತಿಳಿಸಿದ ಅಗರವಾಲ್,ಪ್ರತಿ ಸಲ ಚರ್ಚೆಗಳ ಸಂದರ್ಭದಲ್ಲಿ ಇದನ್ನು ರೈತ ಸಂಘಟನೆಗಳಿಗೆ ತಿಳಿಸಲಾಗಿದೆ ಮತ್ತು ಎಂಎಸ್‌ಪಿ ಕುರಿತು ಲಿಖಿತ ಭರವಸೆಯನ್ನು ನೀಡಲು ಸರಕಾರವು ಸಿದ್ಧವಿದೆ ಎನ್ನುವುದನ್ನೂ ಸ್ಪಷ್ಟಪಡಿಸಲಾಗಿದೆ ಎಂದರು.
ಸಂಯುಕ್ತ ಕಿಸಾನ್ ಮೋರ್ಚಾದ ಡಿ.23ರ ಪತ್ರಕ್ಕೆ ಉತ್ತರವಾಗಿ ಅಗರವಾಲ್ ಈ ಪತ್ರವನ್ನು ಬರೆದಿದ್ದಾರೆ. ಮಾತುಕತೆಗಳಿಗೆ ತಾವು ಸಿದ್ಧ ಎಂದು ಪತ್ರದಲ್ಲಿ ತಿಳಿಸಿದ್ದ ರೈತ ನಾಯಕರು,ಅರ್ಥಹೀನ ತಿದ್ದುಪಡಿಗಳ ಕುರಿತಂತೆ ಪದೇಪದೇ ತಿರಸ್ಕೃತ ಪ್ರಸ್ತಾವಗಳ ಬದಲು ಸದೃಢ ಪ್ರಸ್ತಾವವನ್ನು ಲಿಖಿತ ರೂಪದಲ್ಲಿ ನೀಡುವಂತೆ ಸ್ಪಷ್ಟಪಡಿಸಿದ್ದರು.
ಪ್ರತಿಭಟನಾನಿರತ ರೈತರು ಎತ್ತಿರುವ ಎಲ್ಲ ಸಮಸ್ಯೆಗಳಿಗೆ ತಾರ್ಕಿಕ ಪರಿಹಾರವನ್ನು ಕಂಡುಕೊಳ್ಳಲು ಸರಕಾರವು ಸಿದ್ಧವಿದೆ ಎಂದು ಪತ್ರದಲ್ಲಿ ತಿಳಿಸಿರುವ ಅಗರವಾಲ್, ಸರಕಾರಕ್ಕೆ ಚರ್ಚೆಗಳಿಗಾಗಿ ಎಲ್ಲ ಬಾಗಿಲುಗಳನ್ನು ಮುಕ್ತವಾಗಿರಿಸುವುದು ಮುಖ್ಯವಾಗಿದೆ. ರೈತ ಸಂಘಟನೆಗಳು ಮತ್ತು ರೈತರನ್ನು ಆಲಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ ಮತ್ತು ಇದನ್ನು ಅದು ನಿರಾಕರಿಸುವುದಿಲ್ಲ ಎಂದು ಹೇಳಿದ್ದಾರೆ.







