ಬ್ರಿಟನ್‌ನಿಂದ ಉಡುಪಿಗೆ ಬಂದ 22 ಮಂದಿಯ ಕೋವಿಡ್-19 ವರದಿ ನೆಗೆಟಿವ್

ಉಡುಪಿ, ಡಿ. 24: ರೂಪಾಂತರಗೊಂಡ ಕೊರೋನ ವೈರಸ್ ಕಂಡುಬಂದ ಬ್ರಿಟನ್ ಸೇರಿದಂತೆ ವಿವಿಧ ದೇಶಗಳಿಂದ ನ.28ರ ಬಳಿಕ ಉಡುಪಿ ಜಿಲ್ಲೆಗೆ ಆಗಮಿಸಿದ 30 ಮಂದಿಯ ಮಾಹಿತಿ ಆರೋಗ್ಯ ಇಲಾಖೆಗೆ ಬಂದಿದ್ದು, ಇವರಲ್ಲಿ ಕೋವಿಡ್-19 ಸೋಂಕಿನ ಪರೀಕ್ಷೆಗೊಳಗಾದ 28 ಮಂದಿಯಲ್ಲಿ 22 ಮಂದಿಯ ವರದಿ ನೆಗೆಟಿವ್ ಆಗಿ ಬಂದಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯ ಆರೋಗ್ಯ ಇಲಾಖೆಗೆ ಒಟ್ಟು 31 ಮಂದಿಯ ಮಾಹಿತಿ ಲಭಿಸಿದ್ದು, ಇವರಲ್ಲಿ ಒಬ್ಬರು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು. ಉಳಿದ 30 ಮಂದಿಯಲ್ಲಿ 28 ಮಂದಿಯ ಗಂಟಲು ದ್ರವ-ಸ್ವಾಬ್-ನ ಪರೀಕ್ಷೆಯನ್ನು ಆರ್‌ಟಿ-ಪಿಸಿಆರ್ ಮೂಲಕ ಮಾಡಲಾಗಿದೆ. ಉಳಿದಿಬ್ಬರು ಬೆಂಗಳೂರಿ ನಲ್ಲಿರುವುದಾಗಿ ತಿಳಿಸಿದ್ದು, ಅವರನ್ನು ಪರೀಕ್ಷೆಗೊಳಪಡಿಸಲಾಗಿಲ್ಲ ಎಂದು ಡಾ.ಸೂಡ ತಿಳಿಸಿದರು.
ಪರೀಕ್ಷೆಗೊಳಪಟ್ಟ 28 ಮಂದಿಯಲ್ಲಿ 22 ಮಂದಿಯ ಫಲಿತಾಂಶ ಇಂದು ಸಂಜೆಯವರೆಗೆ ಲಭ್ಯವಾಗಿದ್ದು, ಎಲ್ಲರೂ ಕೋವಿಡ್‌ಗೆ ನೆಗೆಟಿವ್ ಆಗಿದ್ದಾರೆ. ಉಳಿದ ಆರು ಮಂದಿಯ ಫಲಿತಾಂಶವನ್ನು ಕಾಯಲಾಗುತ್ತಿದೆ ಎಂದೂ ಅವರು ಹೇಳಿದರು.
ವಿದೇಶದಿಂದ ಬಂದವರಲ್ಲಿ ಒಬ್ಬರು ಮಾತ್ರ ನ.28ರಂದು ಜಿಲ್ಲೆಗೆ ಬಂದಿದ್ದರೆ, ಉಳಿದೆಲ್ಲರೂ ಡಿಸೆಂಬರ್ ಮೊದಲ ವಾರದ ಬಳಿಕ ಬಂದವರಾಗಿ ದ್ದಾರೆ. ಇವರಲ್ಲಿ ಉಡುಪಿ ತಾಲೂಕಿನ 25 ಮಂದಿ ಇದ್ದರೆ, ಕುಂದಾಪುರ ತಾಲೂಕಿನ ಇಬ್ಬರು, ಕಾರ್ಕಳ ತಾಲೂಕಿನ ನಾಲ್ವರಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಐವರು ಮಹಿಳೆಯರು ಹಾಗೂ 26 ಮಂದಿ ಪುರುಷರು ಜಿಲ್ಲೆಗೆ ಆಗಮಿಸಿದ್ದಾರೆ.
ಜಿಲ್ಲೆಗೆ ಆಗಮಿಸಿದವರಲ್ಲಿ ಬ್ರಿಟನ್‌ನಿಂದ ಬಂದವರು 28 ಮಂದಿ. ಉಳಿದವರಲ್ಲಿ ಇಬ್ಬರು ಕೆನಡಾದ ಟೊರೆಂಟೊದಿಂದ ಹಾಗೂ ಒಬ್ಬರು ಐರ್ಲೆಂಡ್‌ನ ಡಬ್ಲಿನ್‌ನಿಂದ ಬಂದವರಾಗಿದ್ದಾರೆ. ಹೆಚ್ಚಿನವರು ಉಡುಪಿ ನಗರಕ್ಕೆ ಸೇರಿದವರಾದರೆ, ಮಣಿಪಾಲದ ಒಬ್ಬರು, ಸಾಲಿಗ್ರಾಮ-3, ಸಾಬರಕಟ್ಟೆ-1, ಮುದರಂಗಡಿ-2. ಅಜೆಕಾರು-3, ಕೊಲ್ಲೂರಿನ ಒಬ್ಬರಿದ್ದಾರೆ ಎಂದು ಡಿಎಚ್‌ಓ ವಿವರಿಸಿದರು.







