ಎರಡನೇ ಹಂತದ ಗ್ರಾ.ಪಂ.ಚುನಾವಣೆ: ಶುಕ್ರವಾರ ಬಹಿರಂಗ ಪ್ರಚಾರಕ್ಕೆ ತೆರೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.24: ರಾಜ್ಯಾದ್ಯಂತ ಮೊದಲನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಗಳು ಪೂರ್ತಿಗೊಂಡಿದ್ದು, ಎರಡನೇ ಹಂತದ ಚುನಾವಣೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಎರಡನೇ ಹಂತದ ಗ್ರಾ.ಪಂ.ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ(ಡಿ.25) ತೆರೆ ಬೀಳಲಿದ್ದು, ಗೆಲುವಿಗಾಗಿ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿಯೇ ನಡೆದಿದೆ.
ಎರಡನೇ ಹಂತದ ಚುನಾವಣೆ ಡಿ.27 ರಂದು ನಡೆಯಲಿದ್ದು, 48 ಗಂಟೆಗಳ ಮೊದಲೇ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ಅಭ್ಯರ್ಥಿಗಳ ಹಗಲು-ರಾತ್ರಿ ಎನ್ನದೇ ಹಳ್ಳಿ ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಸ್ಪರ್ಧಿಸಿರುವ ಅಭ್ಯರ್ಥಿಗಳ ಜತೆಗೆ, ರಾಜಕೀಯ ಪಕ್ಷಗಳ ಮುಖಂಡರೂ ಅಭ್ಯರ್ಥಿಗಳೊಂದಿಗೆ ತೆರಳಿ ಮರಯಾಚನೆ ಮಾಡುತ್ತಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆಗಳು ಪಕ್ಷೇತರವಾಗಿ ನಡೆಯುತ್ತಿದ್ದರೂ, ತಮ್ಮ ಪಕ್ಷದ ಜತೆ ಗುರುತಿಸಿಕೊಂಡಿರುವ ಅಭ್ಯರ್ಥಿಗಳೇ ಕಣಕ್ಕಿಳಿದಿರುವುದರಿಂದ ಅವರ ಗೆಲುವಿಗಾಗಿ ಪಕ್ಷದ ನಾಯಕರು ಪಣತೊಟ್ಟಿ ಶ್ರಮಿಸುತ್ತಿದ್ದಾರೆ. ಅಲ್ಲದೆ, ಈ ಚುನಾವಣೆಯ ಮೂಲಕ ಬೇರು ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿಕೊಳ್ಳುವುದು ನಾಯಕರ ಹೊಣೆಗಾರಿಕೆಯಾಗಿದೆ. ಹಾಗಾಗಿ ಎಲ್ಲ ರಾಜಕೀಯ ಪಕ್ಷಗಳು ಗ್ರಾ.ಪಂ. ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ರಾಜಕೀಯ ಪಕ್ಷಗಳ ಸ್ಥಳೀಯ ಪ್ರಬಲ ನಾಯಕರುಗಳು ಕೆಲ ಅಭ್ಯರ್ಥಿಗಳ ಗೆಲುವಿಗಾಗಿ ಹಳ್ಳಿಗಳಲ್ಲಿ ಬಿರುಸಿನ ಓಡಾಟ ನಡೆಸಿ ತಮಗೆ ಬೇಕಾದವರನ್ನು ಗೆಲ್ಲಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ. ಈ ಸ್ಥಳೀಯ ಮುಖಂಡರುಗಳಿಗೆ ರಾಜ್ಯ ಮಟ್ಟದ ಮುಖಂಡರುಗಳು, ಶಾಸಕರು, ಸಂಸದರು ಬೆಂಬಲಕ್ಕೆ ನಿಂತು ತಮ್ಮ ಪಕ್ಷದ ಜತೆ ಗುರುತಿಸಿಕೊಂಡಿರುವ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಎಲ್ಲ ರೀತಿಯ ಹರಸಾಹಸ ನಡೆಸಿದ್ದಾರೆ.
ರಾಜ್ಯದ 109 ತಾಲೂಕುಗಳ 2709 ಗ್ರಾಮ ಪಂಚಾಯತ್ ಗಳಿಗೆ 2ನೇ ಹಂತದಲ್ಲಿ ರವಿವಾರ ಮತದಾನ ನಡೆಯಲಿದೆ. ಕೆಲವು ಗ್ರಾ.ಪಂ.ಗಳ ಕ್ಷೇತ್ರಗಳಿಗೆ ಈಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, 2ನೇ ಹಂತದ ಚುನಾವಣೆಯಲ್ಲಿ 3697 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 216 ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಒಟ್ಟು 39,378 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 1,05,431 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.







