ಸಪ್ತಪದಿ ಯೋಜನೆಯಡಿ ತಿಂಗಳಿಗೆ ಎರಡು ಬಾರಿ ಸಾಮೂಹಿಕ ವಿವಾಹ ಆಯೋಜನೆಗೆ ನಿರ್ಧಾರ

ಬೆಂಗಳೂರು, ಡಿ.24: ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರತಿ ತಿಂಗಳು ಎರಡು ಬಾರಿ ಸಾಮೂಹಿಕ ವಿವಾಹ ಆಯೋಜಿಸಲು ನಿರ್ಧರಿಸಿದ್ದು, ಜನವರಿ ತಿಂಗಳಿನಿಂದ ಇದು ಆರಂಭವಾಗಲಿದೆ.
ಕೊರೋನ ಕಾರಣದಿಂದಾಗಿ ವರ್ಷಕ್ಕೆರಡು ಬಾರಿಯಷ್ಟೇ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಿದ್ದ ಸರಕಾರವು, ತನ್ನ ನಿರ್ಧಾರದ ಕುರಿತು ಮರುಚಿಂತನೆ ಮಾಡಲಾಗಿದ್ದು, ಹೆಚ್ಚಿನ ಜನಸಂಖ್ಯೆಯಿಂದ ಪ್ರತಿ ತಿಂಗಳು ಎರಡು ಬಾರಿ ನಡೆಸಲು ಮುಂದಾಗಿದೆ. ಪ್ರತಿ ತಿಂಗಳು ಎರಡು ಶುಭ ಮೂಹೂರ್ತದಲ್ಲಿ ಮದುವೆ ನಡೆಸಲಾಗುವುದು, 15 ದಿನ ಮುಂಚಿತವಾಗಿಯೇ ವಿವಾಹಕ್ಕಾಗಿ ನೋಂದಾಯಿಸಿಕೊಳ್ಳಬೇಕಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಜನವರಿ 15, 20 ಮತ್ತು ಫೆಬ್ರವರಿ 20 ಮತ್ತು 23 ರಂದು ಸಾಮೂಹಿಕ ವಿವಾಹ ನಡೆಸಲು ಸರಕಾರ ಮುಂದಾಗಿದೆ. ಇದರಿಂದ ಹೆಚ್ಚಿನ ಜನಸಂದಣಿ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದು, ವಧು ವರ ಮತ್ತು ಅವರ ಪೋಷಕರಿಗೆ ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ವರ್ಷ ಏಪ್ರಿಲ್ 26 ಮತ್ತು ಮೇ 24 ರಂದು ರಾಜ್ಯದಾದ್ಯಂತ 100 ಸರಕಾರಿ ಸ್ವಾಮ್ಯದ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳನ್ನು ನಡೆಸಲಾಗುವುದು ಎಂದು ಸರಕಾರ ಘೋಷಿಸಿತ್ತು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಜೂನ್ ಮತ್ತು ಜುಲೈಗೆ ಮುಂದೂಡಲಾಯಿತು, ಮತ್ತೆ ನವೆಂಬರ್-ಡಿಸೆಂಬರ್ ವರೆಗೆ ಮುಂದೂಡಲಾಯಿತು. ಕನಿಷ್ಠ 250 ದಂಪತಿಗಳ ಸಾಮೂಹಿಕ ವಿವಾಹವನ್ನು ನಡೆಸಲು ಸರಕಾರ ಚಿಂತನೆ ನಡೆಸಿತ್ತು.
ಈ ಯೋಜನೆಯಡಿ ಇತ್ತೀಚೆಗೆ ಕೇವಲ 23 ಜೋಡಿಗಳು ಮಾತ್ರ ವಿವಾಹವಾದರು. ಸರಕಾರಕ್ಕೆ ವಿವಾಹ ಕಾರ್ಯಕ್ರಮ ನಡೆಸಲು ಸಾಧ್ಯವಾಗದ ಕಾರಣ ನೋಂದಾಯಿಸಿದ ಕೆಲವು ದಂಪತಿಗಳು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಮದುಮಗನಿಗೆ ಶರ್ಟ್ ಮತ್ತು ಧೋತಿ ಮತ್ತು 5,000 ರೂ. ನಗದು, ವಧುವಿಗೆ ಸೀರೆ, 1,000 ರೂ ನಗದು ಮತ್ತು 8 ಗ್ರಾಂ ತೂಕದ ಮಂಗಳಸೂತ್ರವನ್ನು ಸರಕಾರದಿಂದ ನೀಡಲಾಗುತ್ತದೆ.







