ಅಳಿಯನ ತಂದೆ ಸೇರಿದಂತೆ ಮತ್ತೆ 26 ಮಂದಿಗೆ ಟ್ರಂಪ್ ಕ್ಷಮಾದಾನ

ವಾಶಿಂಗ್ಟನ್, ಡಿ. 24: ತನ್ನ ಅಳಿಯ ಜ್ಯಾರೆಡ್ ಕಶ್ನರ್‌ರ ತಂದೆ ಸೇರಿದಂತೆ ಇನ್ನೂ ತನ್ನ ಹಲವು ಮಿತ್ರರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಕ್ಷಮಾದಾನ ನೀಡಿದ್ದಾರೆ.
ಟ್ರಂಪ್ ತನ್ನ ಬೀಗ ಚಾರ್ಲ್ಸ್ ಕಶ್ನರ್ ಅಲ್ಲದೆ, 2016ರ ತನ್ನ ಚುನಾವಣಾ ಪ್ರಚಾರ ಮುಖ್ಯಸ್ಥ ಪೌಲ್ ಮ್ಯಾನಫೋರ್ಟ್ ಮತ್ತು ದೀರ್ಘಕಾಲೀನ ಮಿತ್ರ ರೋಜರ್ ಸ್ಟೋನ್ಟ್‌ಗೂ ಕ್ಷಮಾದಾನ ನೀಡಿದ್ದಾರೆ ಎಂದು ಶ್ವೇತಭವನವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಟ್ರಂಪ್ ಬುಧವಾರ ಒಟ್ಟು 26 ಮಂದಿಗೆ ಕ್ಷಮಾದಾನ ನೀಡಿದ್ದಾರೆ ಹಾಗೂ ಮೂವರ ಶಿಕ್ಷೆಯನ್ನು ಸಂಪೂರ್ಣವಾಗಿ ಅಥವಾ ಆಂಶಿಕವಾಗಿ ರದ್ದುಗೊಳಿಸಿದ್ದಾರೆ.
ಇದಕ್ಕೂ ಒಂದು ದಿನ ಮೊದಲು, ಟ್ರಂಪ್ ಇನ್ನೂ 15 ಮಂದಿಗೆ ಕ್ಷಮಾದಾನ ನೀಡಿದ್ದಾರೆ ಹಾಗೂ ಐದು ಮಂದಿಯ ಶಿಕ್ಷೆಯನ್ನು ಕಡಿತಗೊಳಿಸಿದ್ದಾರೆ.
ಹತ್ಯಾಕಾಂಡ ನಡೆಸಿದಾತನಿಗೆ ಕ್ಷಮಾದಾನ ನೀಡಿದ ಟ್ರಂಪ್: ವ್ಯಾಪಕ ಖಂಡನೆ
ರಿಪಬ್ಲಿಕನ್ ಪಕ್ಷದ ಭ್ರಷ್ಟ ಸಂಸದರು ಮತ್ತು 2007ರಲ್ಲಿ ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ 14 ನಾಗರಿಕರ ಹತ್ಯಾಕಾಂಡ ನಡೆಸಿದ ಭದ್ರತಾ ಸಿಬ್ಬಂದಿಗೆ ಡೊನಾಲ್ಡ್ ಟ್ರಂಪ್ ಕ್ಷಮಾದಾನ ನೀಡಿರುವುದಕ್ಕಾಗಿ ಬುಧವಾರ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅವರಿಗೆ ಟ್ರಂಪ್ ಮಂಗಳವಾರ ಕ್ಷಮಾದಾನ ನೀಡಿದ್ದರು.
ನಿಸಾರ್ ಚೌಕ ಹತ್ಯಾಕಾಂಡಕ್ಕೆ ಸಂಬಂಧಿಸಿ ಆರು ತಿಂಗಳ ಹಿಂದೆ ನಾಲ್ವರು ಬ್ಲಾಕ್‌ವಾಟರ್ ಭದ್ರತಾ ಗುತ್ತಿಗೆದಾರರ ವಿರುದ್ಧದ ಆರೋಪ ಆರು ವರ್ಷಗಳ ಹಿಂದೆ ಸಾಬೀತಾಗಿತ್ತು. ಹಂತಕ ಭದ್ರತಾ ಸಿಬ್ಬಂದಿಗೆ ಕ್ಷಮಾದಾನ ನೀಡಿರುವುದಕ್ಕಾಗಿ ಇರಾಕ್ ಜನರು ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ.
ನಾಲ್ವರು ಸೈನಿಕರು 2007ರಲ್ಲಿ ಜನಜಂಗುಳಿಯ ಚೌಕದಲ್ಲಿ ಯಾವುದೇ ಪ್ರಚೋದನೆಯಿಲ್ಲದೆ ಗುಂಡು ಹಾರಿಸಿದ್ದರು. ಆ ಹತ್ಯಾಕಾಂಡದಲ್ಲಿ 14 ನಾಗರಿಕರು ಸಾವಿಗೀಡಾಗಿದ್ದರು.