ಡಿ. 25ರಂದು ಅಟಲ್‌ಜೀ ಸ್ಮರಣೆ, ಕಿಸಾನ್ ಸಮ್ಮಾನ್
ಉಡುಪಿ, ಡಿ.24: ಭಾರತದ ಮಾಜಿ ಪ್ರಧಾನಿ, ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 96ನೇ ಜನ್ಮದಿನವನ್ನು ನಾಳೆ ‘ಅಟಲ್‌ಜೀ ಸ್ಮರಣೆ’ ಹಾಗೂ ‘ಕಿಸಾನ್ ಸಮ್ಮಾನ್ ದಿನಾಚರಣೆ’ಯ ಮೂಲಕ ಆಚರಿಸಲಾಗುವುದು ಎಂದು ಬಿಜೆಪಿಯ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಕಡಿಯಾಳಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಕಲ್ಯಾಣಕ್ಕಾಗಿ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ’ಯಡಿಯಲ್ಲಿ ದೇಶದ 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ಅಪರಾಹ್ನ 12 ಗಂಟೆಗೆ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬದ ಪ್ರಯುಕ್ತ ನಾಳೆ ಕಡಿಯಾಳಿ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ವತಿಯಿಂದ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಬೆಳಗ್ಗೆ 9 ರಿಂದ ಈ ಶಿಬಿರ ಪ್ರಾರಂಭ ಗೊಳ್ಳಲಿದ್ದು, ಶಿಬಿರದಲ್ಲಿ ಒಟ್ಟು 96 ಯೂನಿಟ್ ರಕ್ತವನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಂದರು.
ಕಾರ್ಯಕ್ರಮ ಎಲ್ಲಾ ಮಂಡಲ ಮಟ್ಟದಲ್ಲಿ ನಡೆಯಲಿದೆ. ವಿವಿಧ ಮೋರ್ಚಾಗಳ ವತಿಯಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಹಿಳಾ ಮೋರ್ಚಾದ ವತಿಯಿಂದ ಉಡುಪಿಯ ಹೊಸಬೆಳಕು ವೃದ್ಧಾಶ್ರಮದ ಮೂವರು ವೃದ್ಧರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತೆ, ಯುವ ಮೋರ್ಚಾ ದಿಂದ ನೀಲಾವರದ ಗೋಶಾಲೆಯಲ್ಲಿ ಗೋಸೇವೆ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೇ ಅಲ್ಪಸಂಖ್ಯಾತ ಮೋರ್ಚಾದಿಂದ ಶಂಕರಪುರ ವಿಶ್ವಾಸದ ಮನೆ ಅನಾಥಾಶ್ರಮದ 280 ಅನಾಥರಿಗೆ ಹಣ್ಣುಹಂಪಲು ವಿತರಣೆ, ಎಸ್‌ಟಿ ಮೋರ್ಚಾದಿಂದ ಬ್ರಹ್ಮಾವರ ಸರಕಾರಿ ಆಸ್ಪತ್ರೆಯ ಬಾಣಂತಿಯರಿಗೆ ಹಣ್ಣುಹಂಪಲು ವಿತರಣೆ, ಹಿಂದುಳಿದ ವರ್ಗಗಳ ಮೋರ್ಚಾದಿಂದ ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನದ ಮಕ್ಕಳಿಗೆ ಊಟೋಪಚಾರ, ದಿನಸಿ ಸಾಮಗ್ರಿ ವಿತರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ವಿಖ್ಯಾತ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ಗುರುಪ್ರಸಾದ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.







