ಅಯೋಧ್ಯೆಯಲ್ಲಿ ರಾಮ ವಿಗ್ರಹ ಪ್ರತಿಷ್ಠಾಪನೆ ವೇಳೆ ಪೇಜಾವರ ಶ್ರೀ ಜೊತೆ ನಾನೂ ಇದ್ದೆ: ಸಿಎಂ ಯಡಿಯೂರಪ್ಪ

Photo: twitter.com/CMofKarnataka
ಬೆಂಗಳೂರು, ಡಿ.24: ಅಯೋಧ್ಯೆಯಲ್ಲಿ 28 ವರ್ಷಗಳ ಹಿಂದೆ ವಿವಾದಿತ ಕಟ್ಟಡ ಧ್ವಂಸಗೊಳಿಸಿದ ಬಳಿಕ ಲಕ್ಷಾಂತರ ಕರಸೇವಕರ ಸಮ್ಮುಖದಲ್ಲಿ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಿದ ವೇಳೆ ವಿಶ್ವೇಶತೀರ್ಥ ಶ್ರೀಪಾದರೊಂದಿಗೆ ನಾನೂ ಭಾಗಿಯಾಗಿದ್ದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಗುರುವಾರ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರ 82ನೇ ಸನ್ಯಾಸ ಪೀಠಾರೋಹಣ ವರ್ಧಂತಿ ಸಂಸ್ಮರಣಾರ್ಥ ನಗರದ ಕತ್ರಿಗುಪ್ಪೆಯ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ವೃಂದಾವನ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
1992ರಲ್ಲಿ ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಧ್ವಂಸಗೊಂಡ ಬಳಿಕ ಅದೇ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ, ಸಾವಿರಾರು ಸಾಧು ಸಂತರು ಲಕ್ಷಾಂತರ ಕರಸೇವಕರ ಸಮ್ಮುಖದಲ್ಲಿ ಅಲ್ಲಿ ರಾಮಲಲ್ಲಾನ ವಿಗ್ರಹವನ್ನು ವಿಶ್ವೇಶತೀರ್ಥ ಶ್ರೀಪಾದರು ಪ್ರತಿಷ್ಠೆ ಮಾಡಿದ ಸಂದರ್ಭ ನಾನೂ ಅಲ್ಲಿದ್ದೆ. ಅದು ನನ್ನ ಭಾಗ್ಯ ಎಂದು ಸಿಎಂ ತಿಳಿಸಿದರು. ಎಳೆಯ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿ, 80 ವರ್ಷಗಳ ಕಾಲ ವಿದ್ವತ್ತು ಮತ್ತು ಮಾನವೀಯ ಕಳಕಳಿಯ ಸೇವೆಗಳನ್ನು ನಡೆಸಿದ, ಹಲವಾರು ಭಕ್ತರ ನಂಬಿಕೆಗೆ ಪಾತ್ರವಾದ ವಿಶ್ವೇಶತೀರ್ಥರು ಯೋಗಿ, ಸಾಧಕ ಯತಿ ಎಂದರು.
ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಅವರು ಮಾತನಾಡಿ, ರಾಮಜನ್ಮಭೂಮಿ ಆಂದೋಲನದಲ್ಲಿ ಅವರಿಬ್ಬರೂ ಜೊತೆಯಾಗಿ ಭಾಗವಹಿಸಿದ್ದು ಮತ್ತು ಅಧಿಕಾರದಲ್ಲಿದ್ದಾಗಲೆಲ್ಲ ಉಡುಪಿಯ ಅಭಿವೃದ್ಧಿಗೆ ಹಾಗೂ ಉಡುಪಿ ಮಠಗಳಿಗೆ ವಿಶೇಷ ಸಹಕಾರ ನೀಡಿದ್ದನ್ನು ಸ್ಮರಿಸಿಕೊಂಡರು. ಇತ್ತೀಚೆಗಷ್ಟೇ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾನೂನಿಗೆ ಶಾಸನಸಭೆಯಲ್ಲಿ ಅಂಗೀಕಾರ ಪಡೆದು, ಕೋಟ್ಯಂತರ ಜನರ ಮನಗೆದ್ದಿರುವುದಕ್ಕೆ ಅಭಿನಂದಿಸಿದರು. ಅಲ್ಲದೆ, ಈ ಕಾನೂನನ್ನು ಅತ್ಯಂತ ಪರಿಣಾಮ ಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.







