ದಿಲ್ಲಿಯಲ್ಲಿ ಮೊದಲ ಹಂತದಲ್ಲಿ 51 ಲಕ್ಷ ಜನರಿಗೆ ಕೊರೋನ ಲಸಿಕೆ: ಅರವಿಂದ ಕೇಜ್ರಿವಾಲ್

ಹೊಸದಿಲ್ಲಿ, ಡಿ. 23: ಕೇಂದ್ರ ಸರಕಾರದ ಆದ್ಯತಾ ವಿಭಾಗದ ಅಡಿ ಮೊದಲ ಹಂತದಲ್ಲಿ ನಗರದಲ್ಲಿ ಗುರುತಿಸಲಾದ 51 ಲಕ್ಷ ಜನರಿಗೆ ಕೊರೋನ ಲಸಿಕೆ ನೀಡಲಾಗುವುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ.
ಡಿಜಿಟಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿಲ್ಲಿ 74 ಲಕ್ಷ ಡೋಸ್ ಕೊರೋನ ಲಸಿಕೆಯನ್ನು ಸಂಗ್ರಹ ಇರಿಸುವ ಸಾಮರ್ಥ್ಯವನ್ನು ಹೊಂದಿದೆ. ಒಂದು ವಾರದಲ್ಲಿ ನಗರದಲ್ಲಿ ಸಂಗ್ರಹ ಸಾಮರ್ಥ್ಯವನ್ನು 1.15 ಕೋಟಿಗೆ ಹೆಚ್ಚಿಸಲಾಗುವುದು ಎಂದರು. ಗುರುತಿಸಲಾದ 51 ಲಕ್ಷ ಜನರಲ್ಲಿ ಪ್ರತಿಯೊಬ್ಬರ ನೋಂದಣಿ ಮಾಡಲಾಗಿದೆ. ಲಸಿಕೆ ನೀಡುವ ಸ್ಥಳ, ದಿನಾಂಕ ಹಾಗೂ ಸಮಯದ ಕುರಿತ ಮಾಹಿತಿಯನ್ನು ಅವರ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ನೀಡಲಾಗುವುದು ಎಂದು ಅವರು ತಿಳಿಸಿದರು. ದಿಲ್ಲಿಯಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನ ಪರಿಸ್ಥಿತಿ ಸುಧಾರಿಸುತ್ತಿದೆ.
ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶೇ. 1ಕ್ಕಿಂತ ಕಡಿಮೆ ಇದೆ. ಆದರೆ, ಪ್ರತಿಯೊಬ್ಬರೂ ಲಸಿಕೆಗಾಗಿ ಕಾಯುತ್ತಿದ್ದಾರೆ. ಕೊರೋನ ಲಸಿಕೆಯನ್ನು ಸಂಗ್ರಹಿಸಿ ಇರಿಸಲು ಹಾಗೂ ಗುರುತಿಸಲಾದ ಜನರಿಗೆ ನೀಡಲು ದಿಲ್ಲಿ ಸರಕಾರ ಎಲ್ಲ ವ್ಯವಸ್ಥೆ ಮಾಡಿದೆ ಹಾಗೂ ಕೇಂದ್ರ ಸರಕಾರದಿಂದ ಲಸಿಕೆ ಸ್ವೀಕರಿಸಲು ಸಿದ್ಧವಾಗಿದೆ ಎಂದು ಕೇಜ್ರಿವಾಲ್ ತಿಳಿಸಿದರು.





