ಕೋವಿಡ್ ಸೋಂಕು : ಬ್ರಿಟನ್‌ನಿಂದ ಮಂಗಳೂರಿಗೆ ಮತ್ತೆ 8 ಮಂದಿ ಆಗಮನ
ವಿದೇಶದಿಂದ ವಾಪಸಾದ ಎಲ್ಲರ ವರದಿ ನೆಗೆಟಿವ್: ಡಿಎಚ್‌ಒ
ಮಂಗಳೂರು, ಡಿ.24: ಇಂಗ್ಲೆಂಡ್‌ನಲ್ಲಿ ರೂಪಾಂತರಿತ ಕೊರೋನ ಸೋಂಕು ಕಾಣಿಸಿಕೊಂಡಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಬ್ರಿಟನ್‌ನಿಂದ ದ.ಕ. ಜಿಲ್ಲೆಗೆ ಆಗಮಿಸಿದ ಎಲ್ಲರ ಪರೀಕ್ಷೆ ನಡೆಸಲಾಗಿದ್ದು, ಎಲ್ಲವೂ ನೆಗೆಟಿವ್ ಆಗಿರುವುದು ದೃಢಪಟ್ಟಿದೆ. ಇದರೊಂದಿಗೆ ಮತ್ತೆ ಎಂಟು ಮಂದಿ ಬ್ರಿಟನ್‌ನಿಂದ ಬಂದ ಮಾಹಿತಿ ಆರೋಗ್ಯ ಇಲಾಖೆಗೆ ಗುರುವಾರ ಗೊತ್ತಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಕೂಡ ಪಡೆದುಕೊಳ್ಳಲಾಗಿದೆ. ಶುಕ್ರವಾರ ಇದರ ವರದಿ ಬರಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಈ ಮೊದಲು ಬ್ರಿಟನ್‌ನಿಂದ 66 ಮಂದಿ ದ.ಕ. ಜಿಲ್ಲೆಗೆ ಬಂದಿರುವ ಮಾಹಿತಿಯನ್ನು ಆರೋಗ್ಯ ಇಲಾಖೆ ಪಡೆದುಕೊಂಡಿತ್ತು. ಅವರಲ್ಲಿ ಇಬ್ಬರು ಟಿಕೆಟ್ ಬುಕ್ ಮಾಡಿದ್ದರೂ ಊರಿಗೆ ವಾಪಸಾಗಿರಲಿಲ್ಲ. ಮೂವರು ಬಂದು ಈಗಾಗಲೇ ವಾಪಸ್ ಬ್ರಿಟನ್‌ಗೆ ತೆರಳಿದ್ದಾರೆ. ಉಳಿದ ಎಲ್ಲರ ಪರೀಕ್ಷೆ ವರದಿ ನೆಗೆಟಿವ್ ಆಗಿದೆ. ಬ್ರಿಟನ್‌ಗೆ ವಾಪಸಾದ ಮೂವರು ಕೂಡ ಹೋಗುವಾಗ ಪರೀಕ್ಷೆ ಮಾಡಿದ್ದು, ನೆಗೆಟಿವ್ ಬಂದಿತ್ತು ಎಂದು ಡಿಎಚ್‌ಒ ಸ್ಪಷ್ಟಪಡಿಸಿದರು.





