ಮಂಗಳೂರಿನಿಂದ ಮುಂಬೈಗೆ ಪ್ರತಿದಿನ ಗೋ ಏರ್ ವಿಮಾನ
ಮಂಗಳೂರು, ಡಿ.24: ಭಾರತೀಯ ವಿಮಾನಯಾನ ಸಂಸ್ಥೆಯಾದ ‘ಗೋಏರ್’ ತನ್ನ ದೇಶೀಯ ಜಾಲವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದು, ಮಂಗಳೂರಿನಿಂದ ಮುಂಬೈಗೆ ಪ್ರತಿದಿನ ನೇರ ವಿಮಾನ ಸೌಲಭ್ಯವನ್ನು ಆರಂಭಿಸಿದೆ.
ಗುರುವಾರದಿಂದಲೇ ಸೇವೆ ಆರಂಭವಾಗಿದ್ದು, ಅತ್ಯಾಧುನಿಕ ‘ಏರ್‌ಬಸ್ 320 ನಿಯೋ’ ಮೂಲಕ ಗೋಏರ್ ಮಂಗಳೂರು ಮತ್ತು ಮುಂಬೈ ಯನ್ನು ಸಂಪರ್ಕಿಸಲಿದೆ.
ಮಂಗಳೂರಿಗೆ ತ್ವರಿತ ಮತ್ತು ಅನುಕೂಲಕರ ಸಂಪರ್ಕವನ್ನು ಒದಗಿಸುವ ದೃಷ್ಟಿಯಿಂದ ಈ ವಿಮಾನದ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ವಿಮಾನ ಪ್ರಯಾಣದ ಟಿಕೆಟ್ ಬುಕ್ಕಿಂಗ್ ನ್ನು ಎಲ್ಲ ಕಾಯ್ದಿರಿಸುವಿಕೆ ಚಾನಲ್‌ಗಳ ಮೂಲಕ ಮಾಡಲು ಅವಕಾಶವಿದೆ ಎಂದು ಗೋ ಏರ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೌಶಿಕ್ ಖೋನಾ ವರ್ಚುವಲ್ ತಿಳಿಸಿದ್ದಾರೆ.
ಗೋ ಏರ್ ವಿಮಾನ ‘ಜಿ8 0338’ ಪ್ರತಿದಿನ ಬೆಳಗ್ಗೆ 9:30ಕ್ಕೆ ಮಂಗಳೂರಿನಿಂದ ಹೊರಟು, 11 ಗಂಟೆಗೆ ಮುಂಬೈ ತಲುಪಲಿದೆ. ಅಂತೆಯೇ ‘ಜಿ8 0335’ ವಿಮಾನ ಮುಂಬೈನಿಂದ ಬೆಳಗ್ಗೆ 7:40ಕ್ಕೆ ಹೊರಟು 9 ಗಂಟೆಗೆ ಮಂಗಳೂರು ತಲುಪಲಿದೆ.
ದೇಶದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಹಾಗೂ ಕರ್ನಾಟಕದ ಪ್ರಮುಖ ಬಂದರು ನಗರವಾಗಿರುವ ಮಂಗಳೂರು ಮತ್ತು ಮುಂಬೈನ ವ್ಯವಹಾರ ಮತ್ತು ಪ್ರವಾಸೋದ್ಯಮ ಇನ್ನಷ್ಟು ಪ್ರಗತಿ ಹೊಂದಲು ಇದು ಪೂರಕವಾಗಲಿದೆ ಎಂದು ವಿವರಿಸಿದರು.
ಕರ್ನಾಟಕದ ಪ್ರವೇಶದ್ವಾರ ಮತ್ತು ಹಲವು ರಾಸಾಯನಿಕ ಕಾರ್ಖಾನೆಗಳ ತವರೂರಾಗಿರುವ ಈ ನಗರದ ಆರ್ಥಿಕತೆಯು ಕೈಗಾರಿಕೆ, ವಾಣಿಜ್ಯ ಮತ್ತು ಕೃಷಿ ಸಂಸ್ಕರಣೆ ಘಟಕಗಳನ್ನೂ ಹೊಂದಿದೆ. ದೇಶದ ವಾಣಿಜ್ಯ ರಾಜಧಾನಿಯಾದ ಮುಂಬೈ ಜತೆಗೆ ನೇರ ಹಾಗೂ ಕ್ಷಿಪ್ರ ಸಂಪರ್ಕ ಸಾಧ್ಯವಾಗುವ ಹಿನ್ನೆಲೆಯಲ್ಲಿ ವ್ಯಾಪಾರ- ವ್ಯವಹಾರಕ್ಕೆ ಉತ್ತೇಜನ ದೊರೆಕಲಿದೆ ಎಂದು ಅಭಿಪ್ರಾಯಪಟ್ಟರು.
ದೇಶೀಯ ವಿಮಾನ ಯಾನ ಬೇಡಿಕೆಯ ಪುನಶ್ಚೇತನ ಕಂಡುಬರುತ್ತಿದೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಶೇ.10ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ನವೆಂಬರ್‌ವರೆಗೆ ಸುಮಾರು 63.54 ಲಕ್ಷ ತಲುಪಿದೆ. ಈ ಬೇಡಿಕೆಗೆ ಸ್ಪಂದಿಸಿ, ಮುಂಬೈನಿಂದ ಮಂಗಳೂರಿಗೆ ದೈನಿಕ ನೇರ ವಿಮಾನ ಸೇವೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.







