ಬೆಂಗಳೂರು: 83.22 ಕೋಟಿ ರೂ. ದಂಡ ಸಂಗ್ರಹಿಸಿದ ಸಂಚಾರ ಪೊಲೀಸರು

ಬೆಂಗಳೂರು, ಡಿ.24: ರಸ್ತೆ ಸಾರಿಗೆ ನಿಯಮ ಉಲ್ಲಂಘನೆ ಸಂಬಂಧ ಪ್ರಸ್ತುತ ವಾರ್ಷಿಕ ಸಾಲಿನಲ್ಲಿ 7,32,489 ಪ್ರಕರಣಗಳನ್ನು ಪತ್ತೆಹಚ್ಚಿ 83.22 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.
2020ನೇ ವಾರ್ಷಿಕ ಸಾಲಿನ ಆರಂಭದಿಂದ ನವೆಂಬರ್ ಅಂತ್ಯಕ್ಕೆ ನಗರ ಸಂಚಾರ ಪೊಲೀಸರು 7,32,489 ಸಂಚಾರಿ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದು, 83,22,22,910 ರೂ. ದಂಡವಸೂಲಿ ಮಾಡಿದ್ದು, ಡಿಸೆಂಬರ್ ನಲ್ಲಿ ದಂಡ ಸಂಗ್ರಹ 90 ಕೋಟಿ ಮುಟ್ಟಲಿದೆ ಎಂದು ತಿಳಿದುಬಂದಿದೆ.
ಕಳೆದ ವರ್ಷ 89,18,84,635 ರೂ. ದಂಡ ಸಂಗ್ರಹವಾಗಿತ್ತು. ಈ ವರ್ಷ ಕೋವಿಡ್ ನಡುವೆಯೂ ದೊಡ್ಡಪ್ರಮಾಣದಲ್ಲಿ ದಂಡ ಸಂಗ್ರಹವಾಗುವ ಮೂಲಕ ಅಚ್ಚರಿ ಮೂಡಿಸಿದೆ.
ಇನ್ನು, ಹೆಲ್ಮೆಟ್ ಧರಿಸದ ಪ್ರಕರಣಗಳೇ ಹೆಚ್ಚಾಗಿದ್ದು, 27,59,480 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹಿಂಬದಿ ಸವಾರರು ಹೆಲ್ಮೆಟ್ ಧರಿಸದವರ ವಿರುದ್ಧ 16,62,029 ಪ್ರಕರಣ, ಕೆಂಪುದೀಪ ಸಂಚಾರ ಉಲ್ಲಂಘನೆ 8,12,108 ಹಾಗೂ ನೋ ಪಾರ್ಕಿಂಗ್ ಮಾಡಿದವರ ವಿರುದ್ಧ 6,17,572 ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





