ಬಾಕ್ಸಿಂಗ್ ಡೇ ಟೆಸ್ಟ್ ಗೆ ಆಸೀಸ್ ತಂಡದಲ್ಲಿ ಬದಲಾವಣೆ ಇಲ್ಲ: ಲ್ಯಾಂಗರ್

ಮೆಲ್ಬೊರ್ನ್: ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಪ್ರಾರಂಭವಾಗುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ. ಮೊದಲ ಪಂದ್ಯದಲ್ಲಿ ಆಡಿರುವ ಆಟಗಾರರನ್ನೇ ಅಂತಿಮ ಹನ್ನೊಂದರಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.
ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯ ತಂಡ ಪ್ರವಾಸಿ ಭಾರತದ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಗಳಿಸಿ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು.
ಗಾಯದಿಂದಾಗಿ ಮೊದಲ ಟೆಸ್ಟ್ ನಿಂದ ಹೊರಗುಳಿದ ಓಪನಿಂಗ್ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈಗಾಗಲೇ ಪಂದ್ಯದಿಂದ ಹೊರಗುಳಿದಿದ್ದರು. ಅವರು ಎರಡನೇ ಟೆಸ್ಟ್ ಗೂ ಲಭ್ಯರಿಲ್ಲ ಎಂದು ಲ್ಯಾಂಗರ್ ಹೇಳಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ದಿನಕ್ಕೆ 30,000 ಅಭಿಮಾನಿಗಳಿಗೆ ಕ್ರಿಕೆಟ್ ವೀಕ್ಷಣೆಗೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದ ಲ್ಯಾಂಗರ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯ ತಂಡ ಹೆಚ್ಚಿನ ಲಾಭ ಪಡೆಯಲಿದೆ ಎಂದು ಲ್ಯಾಂಗರ್ ಹೇಳಿದ್ದಾರೆ.
‘‘ವಿರಾಟ್ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಮತ್ತು ಶಮಿ ಅವರು ಭಾರತದ ಬೌಲಿಂಗ್‌ನ ಪ್ರಮುಖ ಅಸ್ತ್ರ ಎಂದು ನಾನು ಭಾವಿಸುತ್ತೇನೆ’’ ಎಂದರು.
‘‘ನಾವು ಮೊದಲ ದಿನ ಹೇಗೆ ಮೇಲುಗೈ ಸಾಧಿಸ ಬೇಕೆಂದು ನಮಗೆ ತಿಳಿದಿದೆ. ಹೊಸ ನಾಯಕನಾಗಿದ್ದರೆ ರಹಾನೆ ಅವರ ಮೇಲೆ ಹೇಗೆ ಒತ್ತಡ ಹೇರಬೇಕೆಂದು ನಮಗೆ ತಿಳಿದಿದೆ’’ ಎಂದು ಹೇಳಿದರು.







