ಕೋವಿಡ್ ಪರಿಣಾಮ: ಕಿರಿಯರ ಫಿಫಾ ವಿಶ್ವಕಪ್ ರದ್ದು

ಜೂರಿಚ್, ಡಿ.25: ಮುಂದಿನ ವರ್ಷ ನಡೆಯಬೇಕಿದ್ದ 20 ವರ್ಷ ವಯೋಮಿತಿಯ ಮತ್ತು 17 ವರ್ಷ ವಯೋಮಿತಿಯ ಪುರುಷರ ವಿಶ್ವಕಪ್ ರದ್ದುಪಡಿಸಲು ಫಿಫಾ ಮಂಡಳಿಯ ಬ್ಯೂರೊ ನಿರ್ಧರಿಸಿದೆ.
2023ನೇ ಸಾಲಿನ ವಿಶ್ವಕಪ್ ಹಕ್ಕನ್ನು ಇಂಡೋನೇಷ್ಯಾ ಮತ್ತು ಪೆರುವಿಗೆ ನೀಡಲೂ ಫಿಫಾ ಮಂಡಳಿ ನಿರ್ಧರಿಸಿದೆ. ಕೋವಿಡ್-19 ಕಾರಣದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
"ಕೋವಿಡ್-19 ಸಾಂಕ್ರಾಮಿಕ ಕಾರಣದಿಂದ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಲು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆತಿಥ್ಯ ವಹಿಸುವ ದೇಶಗಳು ಸೇರಿದಂತೆ ಸಂಬಂಧಪಟ್ಟ ಹಕ್ಕುದಾರರ ಜತೆ ಫಿಫಾ ನಿರಂತರ ಸಂವಾದ ನಡೆಸಿದ್ದು, ಎರಡೂ ಕೂಟಗಳ ಆಯೋಜಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು 2021ರಲ್ಲಿ ನಡೆಯಬೇಕಿದ್ದ ವಿಶ್ವಕಪ್ ರದ್ದುಪಡಿಸಲು ನಿರ್ಧರಿಸಲಾಗಿದೆ" ಎಂದು ಫಿಫಾ ಹೇಳಿಕೆ ನೀಡಿದೆ.
"ಕ್ರೀಡಾಕೂಟಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಎದುರಾಗಿರುವ ಸವಾಲುಗಳನ್ನು ಬಗೆಹರಿಸುವ ಮಟ್ಟಕ್ಕೆ ಜಾಗತಿಕ ಪರಿಸ್ಥಿತಿ ಸುಧಾರಿಸಿಲ್ಲ" ಎಂದು ವಿವರಿಸಿದೆ. ಈ ಟೂರ್ನಿಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಇಂಡೋನೇಷ್ಯಾ ಮತ್ತು ಪೆರು ನಡೆಸಿದ ಸಿದ್ಧತೆಗಳ ಬಗ್ಗೆ ಅತಿಥೇಯ ದೇಶಗಳಿಗೆ ಕೃತಜ್ಞತೆ ಸಲ್ಲಿಸಿದೆ. ಯಶಸ್ವಿ ಟೂರ್ನಿಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಫಿಫಾ ಅತಿಥೇಯ ದೇಶಗಳ ಜತೆ ನಿರಂತರ ಸಂಪರ್ಕದಲ್ಲಿದೆ ಎಂದು ಪ್ರಕಟನೆ ವಿವರಿಸಿದೆ.







