"ರೈತರ ಪ್ರತಿಭಟನೆ ಹಲವು ಭಾರತೀಯ-ಅಮೆರಿಕನ್ನರ ಮೇಲೂ ಪರಿಣಾಮ ಬೀರುತ್ತಿದೆ"
ಅಮೆರಿಕದ ಏಳು ಸಂಸದರ ಗುಂಪು ಕಳವಳ

ಪ್ರಮೀಳಾ ಜಯಪಾಲ್
ವಾಷಿಂಗ್ಟನ್, ಡಿ.25: ಭಾರತದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಭಾರತೀಯ ಅಮೆರಿಕನ್ನರ ಮೇಲೂ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿರುವ ಭಾರತೀಯ ಅಮೆರಿಕನ್ ಸಂಸದೆ ಪ್ರಮೀಳಾ ಜಯಪಾಲ್ ಸಹಿತ 7 ಪ್ರಭಾವೀ ಅಮೆರಿಕನ್ ಸಂಸದರು, ಈ ಬಗ್ಗೆ ಭಾರತದೊಂದಿಗೆ ಪ್ರಸ್ತಾವಿಸುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋರನ್ನು ಆಗ್ರಹಿಸಿದ್ದಾರೆ.
ಇದು ನಿರ್ದಿಷ್ಟವಾಗಿ ಪಂಜಾಬ್ನೊಂದಿಗೆ ಸಂಪರ್ಕವಿರುವ ಸಿಖ್ ಅಮೆರಿಕನ್ನರಿಗೆ ಸಂಬಂಧಿಸಿದ ವಿಷಯವಾಗಿದ್ದರೂ, ಇತರ ಭಾರತೀಯ ಅಮೆರಿಕನ್ನರ ಮೇಲೂ ವ್ಯಾಪಕ ಪರಿಣಾಮ ಬೀರುತ್ತದೆ ಎಂದು ಡಿಸೆಂಬರ್ 23ರಂದು ಬರೆದಿರುವ ಪತ್ರದಲ್ಲಿ 7 ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ. ‘ಪಂಜಾಬ್ನಲ್ಲಿ ತಮ್ಮ ಪೂರ್ವಜರ ಜಮೀನು ಮತ್ತು ಕುಟುಂಬ ಸದಸ್ಯರನ್ನು ಹೊಂದಿರುವ ಹಲವು ಭಾರತೀಯ ಅಮೆರಿಕನ್ನರು, ಭಾರತದಲ್ಲಿರುವ ತಮ್ಮ ಕುಟುಂಬದ ಯೋಗಕ್ಷೇಮದ ಬಗ್ಗೆ ಚಿಂತಿತರಾಗಿದ್ದಾರೆ. ಈ ಗುರುತರ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಭಾರತವನ್ನು ಸಂಪರ್ಕಿಸಿ ವಿದೇಶಗಳಲ್ಲಿ ವಾಕ್ಸ್ವಾತಂತ್ರದ ವಿಷಯದಲ್ಲಿ ಅಮೆರಿಕದ ಬದ್ಧತೆಯನ್ನು ಸ್ಪಷ್ಟಪಡಿಸಬೇಕು ’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
‘ರಾಜಕೀಯ ಪ್ರತಿಭಟನೆಗಳು ರೂಢಿಯಾಗಿರುವ ಅಮೆರಿಕವು ಈ ಸಾಮಾಜಿಕ ಕ್ಷೋಭೆಯ ಅವಧಿಯಲ್ಲಿ ಭಾರತಕ್ಕೆ ಸಲಹೆ ನೀಡಬಹುದು. ಅಸ್ತಿತ್ವದಲ್ಲಿರುವ ಕಾನೂನಿಗೆ ಅನುಸಾರವಾಗಿ ರಾಷ್ಟ್ರೀಯ ಕಾರ್ಯಸೂಚಿಯನ್ನು ನಿರ್ಧರಿಸುವ ಭಾರತ ಸರಕಾರದ ಹಕ್ಕನ್ನು ರಾಷ್ಟ್ರೀಯ ಸಂಸದರಾಗಿ ನಾವು ಗೌರವಿಸುತ್ತೇವೆ. ಜೊತೆಗೆ, ತಮ್ಮ ಆರ್ಥಿಕ ಸುರಕ್ಷತೆಯ ಮೇಲಿನ ಆಕ್ರಮಣ ಎಂದು ಹಲವಾರು ಭಾರತೀಯ ರೈತರು ಅವಲೋಕಿಸಿರುವ ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತದಲ್ಲಿ ಮತ್ತು ವಿದೇಶದಲ್ಲಿ ಶಾಂತರೀತಿಯಲ್ಲಿ ಪ್ರತಿಭಟಿಸುವವರ ಹಕ್ಕನ್ನೂ ಒಪ್ಪಿಕೊಳ್ಳುತ್ತೇವೆ ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕದ ಸಂಸದರಾದ ಪ್ರಮೀಳಾ ಜಯಪಾಲ್, ಡೊನಾಲ್ಡ್ ನಾರ್ಕ್ರೋಸ್, ಬ್ರೆಂಡನ್ ಬಾಯ್ಲೆ, ಬ್ರಿಯಾನ್ ಫಿಝ್ಪ್ಯಾಟ್ರಿಕ್, ಮೇರಿ ಸ್ಕಾನ್ಲನ್, ಡೆಬೀ ಡಿಂಗೆಲ್ ಮತ್ತು ಡೇವಿಡ್ ಟ್ರೋನ್ ಪತ್ರಕ್ಕೆ ಸಹಿ ಹಾಕಿದ್ದಾರೆ.
ರೈತರ ಪ್ರತಿಭಟನೆಯ ವಿಷಯ ಭಾರತದ ಆಂತರಿಕ ವ್ಯವಹಾರವಾಗಿದ್ದು ಈ ವಿಷಯದಲ್ಲಿ ವಿದೇಶಿ ಮುಖಂಡರು ಹಾಗೂ ರಾಜಕಾರಣಿಗಳ ಹೇಳಿಕೆ ಅನಪೇಕ್ಷಿತ ಅನಗತ್ಯವಾಗಿದೆ ಎಂದು ಭಾರತ ಪ್ರತಿಕ್ರಿಯಿಸಿದೆ.







