ವಾಜಪೇಯಿ ರಾಷ್ಟ್ರ ಚಿಂತಿತ ನಾಯಕ : ನಳಿನ್ ಕುಮಾರ್
ಅಟಲ್ ಜನ್ಮ ದಿನಾಚರಣೆ, ಕಿಸಾನ್ ಸಮ್ಮಾನ್ ದಿನಾಚರಣೆ

ಮಂಗಳೂರು, ಡಿ.25: ಅತ್ಯುತ್ತಮ ಆಡಳಿತಗಾರನಾಗಿದ್ದುಕೊಂಡು ಅಜಾತಶತ್ರುವಾಗಿ ಎಲ್ಲ ಪಕ್ಷಗಳ ನಾಯಕರನ್ನು ಸೆಳೆದ ದೇಶದ ಬಗ್ಗೆಯೇ ಆಲೋಚನೆ ಮಾಡುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಷ್ಟ್ರ ಚಿಂತಿತ ನಾಯಕ ಎಂದು ಸಂಸದ ನಳಿನ್ ಕುಮಾರ್ ಕಟೀಲು ವ್ಯಾಖ್ಯಾನಿಸಿದ್ದಾರೆ.
ನಗದರ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ದ.ಕ. ಜಿಲ್ಲಾ ಬಿಜೆಪಿ ಘಟಕ ಹಾಗೂ ರೈತ ಮೋರ್ಛಾದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಹಾಗೂ ಕಿಸಾನ್ ಸಮ್ಮಾನ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರ ಬಗ್ಗೆ ಕಾಳಜಿ ಹೊಂದಿದ್ದ ವಾಜಪೇಯಿ ದೇಶದಲ್ಲಿ ಪ್ರಥಮ ಬಾರಿಗೆ ಕಿಸಾನ್ ಕಾರ್ಡ್ ಪರಿಚಯಿಸಿದ್ದರು. ರೈತರ ಕಣ್ಣೀರು ಒರೆಸಿದರೆ ಮಾತ್ರ ದೇಶದ ಕಣ್ಣೀರು ಒರೆಸಲು ಸಾಧ್ಯ ಎಂಬ ಚಿಂತನೆ ವಾಜಪೇಯಿ ಅವರದ್ದಾಗಿತ್ತು. ಇದೀಗ ವಾಜಪೇಯಿ ಅವರ ರಾಷ್ಟ್ರೀಯ ಚಿಂತನೆ, ದೇಶದ ಅಭಿವೃದ್ಧಿಯ ದಿಸೆಯಲ್ಲಿ ಅವರು ತೋರಿಸಿದ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಗುತ್ತಿದ್ದಾರೆ. ಹಾಗಾಗಿಯೇ ರೈತರ ಸ್ವಾಭಿಮಾನ ಜೀವನಕ್ಕೆ ಪೂರಕವಾಗಿ ವಾರ್ಷಿಕ 6,000 ರೂ.ಗಳನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಕಳೆದ ವರ್ಷದಿಂದ ಆರಂಭಿಸಿದ್ದಾರೆ. ಮಣ್ಣಿನ ಪರೀಕ್ಷೆ ಕಾರ್ಡ್, ರಸಗೊಬ್ಬರ ಕೊರತೆಯಾಗದಂತೆ ಕ್ರಮ, ಮೀನುಗಾರಿಕೆಗಾಗಿ ವಿಶೇಷ ಮಂತ್ರಾಲಯ ಸ್ಥಾಪನೆಯ ಜತೆಗೆ ಇದೀಗ ಎಪಿಎಂಸಿ ಕಾಯ್ದೆಯ ತಿದ್ದುಪಡಿಯ ಮೂಲಕ ರೈತರು ಬೆಳೆದ ಉತ್ಪನ್ನ ನೇರ ಮಾರುಕಟ್ಟೆಗೆ ತಲುಪುವ ವ್ಯವಸ್ಥೆ ಮಾಡಿದ್ದಾರೆ ಎಂದರು.
ರೈತ ಮುಖಂಡ ಕಡಮಜಲು ಸುಭಾಷ್ ರೈ ಮಾತನಾಡಿ, ವಾಜಪೇಯಿ ಅವರ ಜನ್ಮದಿನವನ್ನು ಕಿಸಾನ್ ಸಮ್ಮಾನ್ ದಿನವಾಗಿ ಆಚರಿಸುವುದು ರೈತರಿಗೆ ದೊರೆತ ಗೌರವ ಎಂದರು.
ಪ್ರಧಾನಿ ಮೋದಿ ಎಪಿಎಂಸಿ ಕಾಯ್ದೆಯ ತಿದ್ದುಪಡಿಯ ಮೂಲಕ ರೈತರು ಸ್ವಾವಲಂಬಿಯಾಗಿ ಬದುಕಲು ಅವಕಾಶ ನೀಡಿದ್ದಾರೆ. ಹಿಂದೆಲ್ಲಾ ರೈತರ ಬೆವರು ಮಾರಾಟ ಮಾಡಲು ಮುಕ್ತ ಅವಕಾಶವಿರಲಿಲ್ಲ. ಇದೀಗ ಆ ಅವಕಾಶ ದೊರಕಿದೆ. ಹಾಗಾಗಿ ರೈತರು ಮಸೂದೆ ಪರವಾಗಿ ಮಾತನಾಡಿ ಮೋದಿ ಸರಕಾರಕ್ಕೆ ಶಕ್ತಿ ನೀಡುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕುಳಿತವರು ಮಾತ್ರವಲ್ಲದೆ, ಸಮಾರಂಭದಲ್ಲಿ ಭಾಗವಹಿಸಿದ್ದವರಿಗೆಲ್ಲಾ ಹಸಿರು ಶಾಲು ನೀಡಲಾಗಿತ್ತು. ಎಲ್ಲರೂ ಹಸಿರು ಶಾಲು ಹೆಗಲಿಗೆ ಹಾಕಿಕೊಂಡಿರುವಂತೆಯೇ ಸಭೆಯು ರೈತ ಗೀತೆಯೊಂದಿಗೆ ಆರಂಭಗೊಂಡಿತು.
ವೇದಿಕೆಯಲ್ಲಿ ಶಾಸಕರಾದ ರಾಜೇಶ್ ನಾಯ್ಕಿ, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ಪ್ರತಾಪ್ ಸಿಂಹ ನಾಯಕ್, ಮೇಯರ್ ದಿವಾಕರ ಪಾಂಡೇಶ್ವರ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ವಸಂತ ಕುಮಾರ್ ವಂದಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದ ಸುಮಾರು 9 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸುಮಾರು 18,000 ಕೋಟಿ ರೂ.ಗಳನ್ನು ವರ್ಗಾಯಿಸುವ ಕಾರ್ಯಕ್ರಮ ಹಾಗೂ ದೇಶವನ್ನದ್ದೇಶಿಸಿ ನೀಡಿದ ಸಂದೇಶದ ನೇರ ಪ್ರಸಾರವನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ವೀಕ್ಷಿಸಲು ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ರಾಜಕೀಯವನ್ನು ಪ್ರಾಮಾಣಿಕತೆ, ಶ್ರದ್ಧೆ ಹಾಗೂ ರಾಷ್ಟ್ರಭಕ್ತಿಯ ಚೌಕಟ್ಟಿನಲ್ಲಿ ನಿಲ್ಲಿಸಿದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಇದೀಗ ಅವರ ಚಿಂತನಾ ಹಾದಿಯಲ್ಲಿ ಪ್ರಧಾನಿ ಮೋದಿಯವರು ಕಿಸಾನ್ ಸಮ್ಮಾನ್‌ನಂತಹ ಹಲವಾರು ಯೋಜನೆ, ಕಾಯ್ದೆಗಳ ಮೂಲಕ ರೈತರಿಗೂ ಸ್ವಾಭಿಮಾನದ ಬದುಕನ್ನು ಕಲ್ಪಿಸುತ್ತಿದ್ದಾರೆ.
-ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವರು, ದ.ಕ.













