ಕೃಷಿ ಮಸೂದೆ: ಸರಕಾರದ ವಿರುದ್ಧ ಜಂಟಿ ಹೇಳಿಕೆ ನೀಡಿದ 11 ವಿರೋಧ ಪಕ್ಷಗಳು
“ಯಾರು ಸುಳ್ಳು ಹರಡುತ್ತಿದ್ದಾರೆ”?: ವಿಪಕ್ಷಗಳ ಪ್ರಶ್ನೆ

ಹೊಸದಿಲ್ಲಿ,ಡಿ.25: ಕಾಂಗ್ರೆಸ್, ಎನ್‍ಸಿಪಿ, ಡಿಎಂಕೆ ಸಹಿತ ಹನ್ನೊಂದು ಪಕ್ಷಗಳು ಬಿಜೆಪಿ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಜಂಟಿ ಹೇಳಿಕೆ ಬಿಡುಗಡೆಗೊಳಿಸಿವೆ ಹಾಗೂ ನೂತನ ಕೃಷಿ ಕಾನೂನುಗಳ ಕುರಿತಂತೆ ವಿಪಕ್ಷಗಳು ರೈತರಿಗೆ ಸುಳ್ಳು ಹೇಳಿವೆ ಎಂಬ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯನ್ನು ತರಾಟಗೆ ತೆಗೆದುಕೊಂಡಿವೆ.
ಈ ಜಂಟಿ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್, ಡಿಎಂಕೆಯ ಟಿ ಆರ್ ಬಾಲು, ಗುಪ್ಕರ್ ಮಿತ್ರ ಕೂಟದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಆರ್‍ಜೆಡಿಯ ತೇಜಸ್ವಿ ಯಾದವ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯಧರ್ಶಿ ಡಿ ರಾಜಾ, ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ, ಫಾರ್ವರ್ಡ್ ಬ್ಲಾಕ್‍ನ ದೇಬಬ್ರತ ಬಿಸ್ವಾಸ್ ಹಾಗೂ ಆರ್‍ಎಸ್‍ಪಿಯ ಮನೋಜ್ ಭಟ್ಟಾಚಾರ್ಯ ಸಹಿ ಹಾಕಿದ್ದಾರೆ.
"ಪ್ರಧಾನಿಯ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಸೂಕ್ತ ಚರ್ಚೆಯಿಲ್ಲದೆ ಸಂಸತ್ತಿನಲ್ಲಿ ಈ ಮಸೂದೆಗಳು ಮಂಡನೆಗೊಂಡಾಗ ನಮ್ಮಲ್ಲಿ ಹಲವರು ವಿರೋಧಿಸಿದ್ದೆವು. ಈ ಮಸೂದೆ ಕುರಿತು ಮತದಾನಕ್ಕೆ ಕೇಳಿದವರನ್ನು ಅಮಾನತುಗೊಳಿಸಲಾಯಿತು," ಎಂದು ಹೇಳಿಕೆ ತಿಳಿಸಿದೆ.
"ಎಂಎಸ್‍ಪಿ ಕುರಿತು ವಿಪಕ್ಷಗಳು ಸುಳ್ಳು ಹರಡುತ್ತಿವೆ" ಎಂಬ ಆರೋಪ ಮಾಡಿದ ಸರಕಾರದ ವಿರುದ್ಧ ಕಿಡಿ ಕಾರಿರುವ ವಿಪಕ್ಷಗಳು "ಪ್ರಧಾನಿ ಸ್ವಾಮಿನಾಥನ್ ಆಯೋಗದ ವರದಿ ಜಾರಿ ಕುರಿತು ಹೇಳುತ್ತಿದ್ದಾರೆ. ಈ ವರದಿಯು ಸಿ2+ಶೇ 50 ಎಂಎಸ್‍ಪಿ ಶಿಫಾರಸು ಮಾಡಿತ್ತು. ಈ ಎಂಎಸ್‍ಪಿಯನ್ನು ಜಾರಿಗೊಳಿಸಲು ತಾನು ಅಸಮರ್ಥ ಎಂದು ಇದೇ ಸರಕಾರ ಸುಪ್ರೀಂ ಕೋರ್ಟ್‍ಗೆ ಹೇಳಿತ್ತು. ಹಾಗಾದರೆ ಯಾರು ಸುಳ್ಳು ಹರಡುತ್ತಿದ್ದಾರೆ?" ಎಂದು ಹೇಳಿಕೆಯಲ್ಲಿ ಪ್ರಶ್ನಿಸಲಾಗಿದೆ.
ನೂತನ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು ಎಂದು ಹೇಳಿಕೆಯಲ್ಲಿ ಬಲವಾಗಿ ಆಗ್ರಹಿಸಲಾಗಿದೆ.







