ಖಾಸಗಿ ವ್ಯಕ್ತಿಯಿಂದ ಗೇಟು ನಿರ್ಮಿಸಿ ದಿಗ್ಬಂಧನ ಆರೋಪ : ದಸಂಸ ಆಕ್ರೋಶ
ಹಳ್ಳಿಹೊಳೆ ಸ್ಮಶಾನ ಸಹಿತ ಸರಕಾರಿ ಸೊತ್ತುಗಳ ಅಕ್ರಮ ವಶ

ಕುಂದಾಪುರ, ಡಿ.25: ಹಳ್ಳಿಹೊಳೆ ಗ್ರಾಪಂ ಕಚೇರಿಯ ಅನತಿ ದೂರದ ಗ್ರಾಪಂ ಬಾವಿ, ಸ್ಮಶಾನ, ವೆಂಟೆಡ್‌ಡ್ಯಾಮ್ ಇರುವ ಸರಕಾರಿ ಜಾಗಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಗೇಟು ನಿರ್ಮಿಸಿ ಸಾರ್ವಜನಿಕರಿಗೆ ದಿಗ್ಬಂಧ ವಿಧಿಸಿ ಸರಕಾರಿ ಸೊತ್ತುಗಳನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಸರ್ವೆ ನಂ 198ರ ಸರಕಾರಿ ಜಮೀನನಲ್ಲಿ ಇಡೀ ಗ್ರಾಮಕ್ಕೆ ನೀರು ಸರಬ ರಾಜು ಮಾಡುವ ಪಂಪ್‌ಸೆಟ್ ಅಳವಡಿಸಿರುವ ಸಾರ್ವಜನಿಕ ಪಂಚಾಯತ್ ಬಾವಿ, ಅನಾದಿಕಾಲದಿಂದಲೂ ಗ್ರಾಮಸ್ಥರು ಶವ ಸಂಸ್ಕಾರ ಮಾಡಿಕೊಂಡು ಬಂದಿರುವ ಸ್ಮಶಾನ ಭೂಮಿ ಹಾಗೂ ಸರಕಾರ ದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಚಕ್ರ ನದಿಗೆ ನಿರ್ಮಿಸಲಾದ ವೆಂಟೆಡ್ ಡ್ಯಾಮ್ ಇದೆ.
ಅಲ್ಲದೆ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ಎರಡು ಕೆರೆಗಳನ್ನು ತೋಡಿ ಚಕ್ರ ನದಿಗೆ ನಿರ್ಮಿಸಲಾದ ವೆಂಟೆಡ್ ಡ್ಯಾಮ್ ಮೇಲೆಯೇ ಬೃಹತ್ ಗಾತ್ರದ ಪಂಪ್ ಸೆಟ್ ಅಳವಡಿಸಲಾಗಿದೆ. ಇದರಿಂದ ಡ್ಯಾಮ್ ಬಿರುಕು ಬಿಟ್ಟಿರುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಹಳ್ಳಿಹೊಳೆ ಗ್ರಾಪಂ ವತಿಯಿಂದ ಇಡೀ ಗ್ರಾಮದ ಗ್ರಾಮಸ್ಥರಿಗೆ ಕುಡಿಯುವ ನೀರು ಸರಬರಾಜು ಮಾಡುವ, ಪಂಪ್‌ಸೆಟ್ ಅಳವಡಿಸಿರುವ ಪಂಚಾಯತ್ ಬಾವಿಯ ನೀರನ್ನು ಉಪ ಯೋಗಿಸಲು ಖಾಸಗಿ ವ್ಯಕ್ತಿಯ ಅನುಮತಿ ಪಡೆಯಬೇಕಾಗಿರುವುದು ದುರದೃಷ್ಟಕರ ಎಂದು ದಸಂಸ ದೂರಿದೆ.
ಗ್ರಾಮದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳು ಹಿಂದುಳಿದ ವರ್ಗಗಳ ಬಡ ಜನರೇ ಹೆಚ್ಚಾಗಿ ವಾಸವಾಗಿದ್ದು, ಅನಾದಿಕಾಲದಿಂದಲೂ ಚಕ್ರನದಿ ತಟ ದಲ್ಲಿ ರುವ ಸ್ಮಶಾನ ಭೂಮಿಯಲ್ಲಿ ಶವಗಳನ್ನು ಸುಡುತ್ತ ಬಂದಿದ್ದು ಇದೀಗ ಇಲ್ಲಿ ಶವ ಸುಡುವುದಕ್ಕೂ ಜನರು ಪರಿತಪಿಸುವಂತಾಗಿದೆ ಎಂದು ದಸಂಸ ಆಕ್ರೋಶ ವ್ಯಕ್ತಪಡಿಸಿದೆ.
ಈ ಎಲ್ಲಾ ವಿಚಾರಗಳನ್ನು ಬಗೆಹರಿಸಿ ಸಾರ್ವಜನಿಕರಿಗೆ ಅನುವು ಮಾಡಿ ಕೊಡುವಂತೆ ಕುಂದಾಪುರ ಸಹಾಯಕ ಕಮಿಷನರ್ ಹಾಗು ತಹಶೀಲ್ದಾರ್‌ಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಸಲ್ಲಿಸ ಲಾಗಿದೆ. ಆದರೆ ಈ ತನಕ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಪ್ರಭಾವಿ ಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಈ ರೀತಿ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ದಸಂಸ ಆರೋಪಿಸಿದೆ.
ಅಕ್ರಮವಾಗಿ ಸಾರ್ವಜನಿಕ ಸರಕಾರಿ ಸ್ವತ್ತುಗಳನ್ನು ವಶಪಡಿಸಿಕೊಂಡು ದಿಗ್ಬಂದನ ವಿಧಿಸಿ ನಿರ್ಮಿಸಿರುವ ಗೇಟನ್ನು ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ವಾಸುದೇವ ಮುದೂರು, ನ್ಯಾಯವಾದಿ ಮಂಜುನಾಥ ಗಿಳಿಯಾರು, ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ತಾಲೂಕು ಸಂಚಾಲಕ ಮಂಜುನಾಥ ನಾಗೂರು, ತಾಲೂಕು ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್ ಕುಮಾರ್ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.







