ಪುತ್ತೂರು : ವಿದ್ಯುತ್ ಆಘಾತಕ್ಕೆ ಯುವ ಉದ್ಯಮಿ ಬಲಿ

ಪುತ್ತೂರು: ಅಲ್ಯುಮಿನಿಯಂ ಕೊಕ್ಕೆಯ ಮೂಲಕ ಅಡಕೆ ಮರದಿಂದ ಅಡಕೆ ಕೀಳುತ್ತಿದ್ದ ಸಂದರ್ಭ ವಿದ್ಯುತ್ ತಂತಿ ಸ್ಪರ್ಷಗೊಂಡು ಯುವ ಉದ್ಯಮಿಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ನಿವಾಸಿ ಬಾಬು ಪೂಜಾರಿ ಎಂಬವರ ಪುತ್ರ ರವೀಂದ್ರ ಪೂಜಾರಿ (36) ಮೃತರು.
ಮಂಗಳೂರಿನಲ್ಲಿ ಉದ್ಯಮಿ ಆಗಿರುವ ರವೀಂದ್ರ ಅವರು ಕ್ರಿಸ್ಮಸ್ ರಜೆಯ ನಿಮಿತ್ತ ಮನೆಗೆ ಆಗಮಿಸಿದ್ದರು. ತಮ್ಮ ಮನೆಯ ಸುತ್ತಲಿನಲ್ಲಿರುವ ಅಡಕೆ ಮರದಿಂದ ಅಲ್ಯುಮೀನಿಯಂ ಕೊಕ್ಕೆಯಲ್ಲಿ ಅಡಕೆ ಕೀಳುತ್ತಿದ್ದ ಸಂದರ್ಭ ಪಕ್ಕದಲ್ಲಿದ್ದ ಎಚ್.ಟಿ ವಿದ್ಯುತ್ ತಂತಿಗೆ ಕೊಕ್ಕೆ ತಗುಲಿ ವಿದ್ಯುತ್ ಅಘಾತ ಉಂಟಾಗಿತ್ತು. ರವೀಂದ್ರ ಅವರು ವಿದ್ಯುತ್ ಅಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ ಮತ್ತು ಒಂದು ವರ್ಷದ ಮಗುವನ್ನು ಅಗಲಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





