ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.25: ಕೆಲಸ ಕೊಡಿಸುವ ನೆಪದಲ್ಲಿ ಮನೆಯೊಂದಕ್ಕೆ ಕರೆದುಕೊಂಡು ಹೋಗಿ, ಅಮಲು ಬರುವ ಪದಾರ್ಥ ತಿನ್ನಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಯುವಕನೊಬ್ಬನನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಅನ್ಲೈನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಸಾಗರ್ ಗೌಡ ಬಂಧಿತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಯುವತಿಯ ಸಂಬಂಧಿಯ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಆರೋಪಿ ಸಾಗರ್ ಪರಿಚಯವಾಗಿದ್ದು, ಮೊದಲೇ ಕೆಲಸ ಹುಡುಕುತ್ತಿದ್ದ ಯುವತಿಗೆ ಶೈಕ್ಷಣಿಕ ದಾಖಲಾತಿಗಳನ್ನು ತೆಗೆದುಕೊಂಡು ಬಂದರೆ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ. ಆತನನ್ನು ನಂಬಿದ ಯುವತಿಯು ಶೈಕ್ಷಣಿಕ ದಾಖಲಾತಿಗಳನ್ನು ತೆಗೆದುಕೊಂಡು ಆತನ ಜತೆಯಲ್ಲಿ ಹೋಗಿದ್ದಾಳೆ. ಆದರೆ, ಆರೋಪಿ ಮೊದಲು ಸಂಬಂಧಿಕರ ಮನೆಗೆ ಕರೆದೊಯ್ದಿದ್ದಾನೆ ಎನ್ನಲಾಗಿದೆ.
ಬಳಿಕ ಆಹಾರ ಪದಾರ್ಥದಲ್ಲಿ ಅಮಲು ಬರುವ ವಸ್ತು ಹಾಕಿ, ತಿನ್ನಿಸಿದ್ದಾನೆ. ಬಳಿಕ ಪ್ರಜ್ಞೆ ತಪ್ಪಿದ ಯುವತಿಯ ಮೇಲೆ ಅತ್ಯಾಚಾರ ನಡೆಸಿ ಅಶ್ಲೀಲ ಫೋಟೋ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸಿದ್ದಾನೆ ಎಂದು ಆರೋಪಿಸಲಾಗಿದ್ದು, ಕಾರ್ಯಾಚರಣೆ ನಡೆಸಿದ ಚಂದ್ರಾಲೇಔಟ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.





