ಹೆಲಿಪ್ಯಾಡ್ ಇರುವ ಸ್ಥಳವನ್ನು ಅಗೆದ ರೈತರು: ಆಗಮನ ರದ್ದುಪಡಿಸಿದ ಹರ್ಯಾಣ ಉಪಮುಖ್ಯಮಂತ್ರಿ

ಜಿಂಡ್,ಡಿ.25: ಕರಿಪತಾಕೆಯನ್ನು ಪ್ರದರ್ಶಿಸುತ್ತಾ, ಉಪಮುಖ್ಯಮಂತ್ರಿ ಬಂದಿಳಿಯಬೇಕಾಗಿದ್ದ ಹೆಲಿಪ್ಯಾಡ್ ಇರುವ ಸ್ಥಳವನ್ನೇ ಪ್ರತಿಭಟನೆ ನಡೆಸುತ್ತಿದ್ದ ರೈತರು ಅಗೆದ ಕಾರಣ ಹರ್ಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲ ತನ್ನ ಕ್ಷೇತ್ರಕ್ಕೆ ಆಗಮಿಸಲಾಗದೆ, ಕಾರ್ಯಕ್ರಮವನ್ನು ರದ್ದುಪಡಿಸಿದ ಘಟನೆಯು ನಡೆದಿದೆ. ಈ ಕುರಿತು newindiaexpress.com ವರದಿ ಮಾಡಿದೆ.
ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಸಣ್ಣ ಗುಂಪೊಂದು ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಿದ್ದ ಸ್ಥಳದಲ್ಲಿ ಗುಂಡಿ ತೋಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಉಪ ಮುಖ್ಯಮಂತ್ರಿಗಳ ಆಗಮನವನ್ನು ರದ್ದುಪಡಿಸಲಾಗಿದೆ ಎಂದು ಪಕ್ಷವು ಅಧಿಕೃತ ಹೇಳಿಕೆ ನೀಡಿದೆ ಎಂದು ವರದಿಯಾಗಿದೆ.
“ಉಪ ಮುಖ್ಯಮಂತ್ರಿಗಳು ಅಧಿಕಾರ ಅಥವಾ ನೂತನ ಕಾಯ್ದೆಯಿಂದ ಸಂಕಷ್ಟಕ್ಕೊಳಗಾಗಿರುವ ರೈತರಲ್ಲಿ ಯಾವುದಾದರೊಂದು ಆಯ್ಕೆಯನ್ನು ಮಾಡಬೇಕು” ಎಂದು ರೈತರು ಹೇಳಿಕೆ ನೀಡಿದ್ದಾರೆ. ಸರಕಾರವು ರೈತ ವಿರೋಧಿಯಾಗಿದೆ ಎಂದು ಸರಕಾರದ ವಿರುದ್ಧ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದ್ದಾರೆ ಎಂದು ವರದಿ ತಿಳಿಸಿದೆ.





