ಬ್ರಿಟನ್‌ನಿಂದ ಉಡುಪಿಗೆ ಬಂದ ಎಲ್ಲಾ 28 ಮಂದಿಯ ಕೋವಿಡ್ ವರದಿ ನೆಗೆಟಿವ್
ಉಡುಪಿ, ಡಿ. 25: ರೂಪಾಂತರಗೊಂಡ ಕೊರೋನ ವೈರಸ್ ಕಂಡುಬಂದ ಬ್ರಿಟನ್ ಸೇರಿದಂತೆ ವಿವಿಧ ದೇಶಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕು ಪರೀಕ್ಷೆ ಗೊಳಗಾದ ಎಲ್ಲಾ 28 ಮಂದಿಯ ವರದಿಗಳು ನೆಗೆಟಿವ್ ಆಗಿ ಬಂದಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯ ಆರೋಗ್ಯ ಇಲಾಖೆಗೆ ಒಟ್ಟು 31 ಮಂದಿಯ ಮಾಹಿತಿ ಲಭಿಸಿದ್ದು, ಇವರಲ್ಲಿ ಒಬ್ಬರು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು. ಉಳಿದ 30 ಮಂದಿಯಲ್ಲಿ 28 ಮಂದಿಯ ಗಂಟಲು ದ್ರವ-ಸ್ವಾಬ್-ನ ಪರೀಕ್ಷೆಯನ್ನು ಇಲಾಖೆ ನಡೆಸಿತ್ತು. ಇಬ್ಬರು ಬೆಂಗಳೂರಿನಲ್ಲಿರುವುದಾಗಿ ತಿಳಿದು ಬಂದಿದ್ದು, ಇಬ್ಬರೂ ಈವರೆಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಬಂದಿಲ್ಲ ಎಂದವರು ತಿಳಿಸಿದ್ದಾರೆ.
ಪರೀಕ್ಷೆಗೊಳಪಟ್ಟ 28 ಮಂದಿಯಲ್ಲಿ ಎಂಟು ಮಂದಿಯ ಫಲಿತಾಂಶ ಬುಧವಾರ ನೆಗೆಟಿವ್ ಆಗಿ ಬಂದಿದ್ದರೆ, 14 ಮಂದಿಯ ಫಲಿತಾಂಶ ಗುರುವಾರ ಬಂದಿತ್ತು. ಇನ್ನುಳಿದ ಆರು ಮಂದಿಯ ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು ಎಲ್ಲವೂ ನೆಗೆಟಿವ್ ಆಗಿವೆ ಎಂದು ಡಾ.ಸೂಡ ವಿವರಿಸಿದರು.
ಈ ಮೂಲಕ ನ.28ರ ಬಳಿಕ ಬ್ರಿಟನ್ ಸೇರಿದಂತೆ ವಿವಿಧ ದೇಶಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿರುವ ಮಾಹಿತಿ ಸಿಕ್ಕಿದ ಎಲ್ಲರ ಕೋವಿಡ್ ಪರೀಕ್ಷೆ ಯನ್ನು ನಡೆಸಲಾಗಿದ್ದು, ಎಲ್ಲವೂ ನೆಗೆಟಿವ್ ಆಗಿಯೇ ಬಂದಿದೆ ಎಂದು ಅವರು ತಿಳಿಸಿದರು.
ಬಂದವರಲ್ಲಿ 25 ಮಂದಿ ಉಡುಪಿ ತಾಲೂಕಿನವರು. ಉಳಿದಂತೆ ಕುಂದಾಪುರ ತಾಲೂಕಿನ ಇಬ್ಬರು ಹಾಗೂ ಕಾರ್ಕಳ ತಾಲೂಕಿನ ನಾಲ್ವರಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಐವರು ಮಹಿಳೆಯರು ಹಾಗೂ 26 ಮಂದಿ ಪುರುಷರು ಜಿಲ್ಲೆಗೆ ಆಗಮಿಸಿದ್ದಾರೆ.