ಕಸ್ತೂರ್ ಬಾ ವ್ಯಕ್ತಿತ್ವದ ಮೂಲಕ ಗಾಂಧಿ ಚಿಂತನೆ ವಿಸ್ತಾರವಾಗಿ ಕಾಣಲು ಸಾಧ್ಯ: ಕಮಲಾ ಹಂಪನಾ

ಬೆಂಗಳೂರು, ಡಿ.25: ಕಸ್ತೂರ್ ಬಾ ವ್ಯಕ್ತಿತ್ವದ ಮೂಲಕ ಮಹಾತ್ಮ ಗಾಂಧೀಜಿಯ ಕೌಟುಂಬಿಕೆ, ಸಾಮಾಜಿಕ ಹಾಗೂ ರಾಜಕೀಯ ಬದುಕನ್ನು ನೋಡಿದಾಗ ಗಾಂಧೀಜಿಯ ಅಂತರಂಗ, ಚಿಂತನೆಗಳು ಮತ್ತಷ್ಟು ವಿಸ್ತಾರವಾಗಿ ಕಾಣಲು ಸಾಧ್ಯವಾಗುತ್ತದೆ ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಅಭಿಪ್ರಾಯಿಸಿದ್ದಾರೆ.
ಶುಕ್ರವಾರ ಅವಧಿ ಅಂತರ್‍ಜಾಲದಲ್ಲಿ ಹಮ್ಮಿಕೊಂಡಿದ್ದ ಬರಗೂರು ರಾಮಚಂದ್ರಪ್ಪನವರ 'ಕಸ್ತೂರ್ ಬಾ ಮತ್ತು ಗಾಂಧಿ' ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದ ರಾಜಕೀಯ, ಸಾಮಾಜಿಕ ಚಿಂತನೆಗಳನ್ನು ರೂಪಿಸಿದ ಮಹಾತ್ಮ ಗಾಂಧೀಜಿಯ ಕೌಟುಂಬಿಕ ಜೀವನ ತಿಳಿಯಬೇಕಾರೆ ಕಸ್ತೂರ್ ಬಾ ಮತ್ತು ಗಾಂಧಿ ಕೃತಿಯನ್ನು ಪ್ರತಿಯೊಬ್ಬರು ಓದುವಂತಾಗಲಿ ಎಂದು ತಿಳಿಸಿದ್ದಾರೆ.
ಬರಗೂರು ರಾಮಚಂದ್ರಪ್ಪರವರ ಕಸ್ತೂರ್ ಬಾ ಮತ್ತು ಗಾಂಧಿ ಕೃತಿ ಚಂಪೂ ಕಾವ್ಯದಂತ್ತಿದ್ದು, ಗದ್ಯ ಹಾಗೂ ಪದ್ಯ ಎರಡೂ ಸಮ್ಮಿಳನಗೊಂಡಿದೆ. ಗ್ರೀಕ್ ನಾಟಕಗಳಂತೆ ಹೊಸ ರೀತಿಯ ತಂತ್ರವನ್ನು ಬರಗೂರು ರಾಮಚಂದ್ರಪ್ಪ ತಮ್ಮ ಕೃತಿಯಲ್ಲಿ ಅಳವಡಿಸಿಕೊಂಡಿದ್ದಾರೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿರಿಯ ವಿಮರ್ಶಕ ಪ್ರೊ.ಬಸವರಾಜ ಕಲ್ಗುಡಿ ಮಾತನಾಡಿ, ಚರಿತ್ರೆಯನ್ನು ಸೃಜನಾತ್ಮಕ ಶೈಲಿಗೆ ತರಬೇಕಾದರೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿ ಸ್ವಲ್ಪ ಏರುಪೇರಾದರು ಸಾಮಾಜಿಕ ವಲಯದಲ್ಲಿ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಇದರ ನಡುವೆ ಬರಗೂರು ರಾಮಚಂದ್ರಪ್ಪ ದೇಶದ ಚರಿತ್ರೆಯಲ್ಲಿ ಅತಿ ಮುಖ್ಯವಾದ ಭಾಗವಾದ ಕಸ್ತೂರ್ ಬಾ ಹಾಗೂ ಗಾಂಧೀಜಿಯ ಕೌಟುಂಬಿಕ ಜೀವನವನ್ನು ಕಾದಂಬರಿಯ ಮೂಲಕ ತಾತ್ವಿಕತೆ ಹಾಗೂ ಸೃಜನಾತ್ಮಕತೆಯಲ್ಲಿ ಎಲ್ಲಿಯೂ ಲೋಪವಾಗದಂತೆ ಕಟ್ಟಿಕೊಟ್ಟಿದ್ದಾರೆಂದು ತಿಳಿಸಿದ್ದಾರೆ.
ಲೇಖಕ ಬರಗೂರು ರಾಮಚಂದ್ರಪ್ಪ ಮಾತನಾಡಿ, ಈಗಾಗಲೇ ಕಸ್ತೂರ್ ಬಾ ಕುರಿತು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಸಾಕಷ್ಟು ಪುಸ್ತಕಗಳು ಪ್ರಕಟಗೊಂಡಿದ್ದು, ಎಲ್ಲ ಆಯಾಮದಲ್ಲೂ ಚರ್ಚಿಸಲಾಗಿದೆ. ಆದರೂ ಕಸ್ತೂರ್ ಬಾ ಸಂಬಂಧಿಸಿದ ಹಲವು ಕೃತಿಗಳನ್ನು ಓದಿದ ಮೇಲೆ, ಕಸ್ತೂರ್ ಬಾ ಹಾಗೂ ಗಾಂಧೀಜಿಯ ಸಾಂಸಾರಿಕ ಬದುಕು ದೇಶದ ಸಾಮಾಜಿಕ ಚಳವಳಿಗೆ ಹೇಗೆ ಪೂರಕವಾಗಿತ್ತು. ಇದರಲ್ಲಿ ಕಸ್ತೂರ್ ಬಾ ಪಾತ್ರವೇನು ಎಂಬುದರ ಕುರಿತು ಬರೆಯಬೇಕೆಂದು ಅನಿಸಿತು. ಆ ಚೌಕಟ್ಟಿನಲ್ಲಿ ಈ ಕಾದಂಬರಿ ರೂಪಿತವಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬರಹಗಾರ ರಂಗಾರೆಡ್ಡಿ ಕೋಡಿರಾಂಪುರ, ಪ್ರಕಾಶಕ ಅಭಿರುಚಿ ಗಣೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಒಂದು ಪ್ರಜಾಸತ್ತೆ ಉಳಿಯಲು ಆತ್ಮನಿರೀಕ್ಷೆ ಮುಖ್ಯ. ಆದರೆ, ನಾವು ಇಂದು ಆತ್ಮನಿರೀಕ್ಷೆಯ ಅಭಾವದಲ್ಲಿ ನರಳುತ್ತಿದ್ದೇವೆ. ಒಂದು ಪ್ರಜಾಪ್ರಭುತ್ವದ ಉಳಿವಿಗೆ ಬೇಕಿರುವುದು ಕಣ್ಣು ಮತ್ತು ಕಿವಿ. ಇವೆರಡೂ ಸರಿಯಾಗಿದ್ದರೆ ಪ್ರಜಾಸತ್ತಾತ್ಮಕ ಮೌಲ್ಯಗಳು ಹೆಚ್ಚು ಗಟ್ಟಿಯಾಗಿ, ಆತ್ಮ ನಿರೀಕ್ಷೆ ಬರುತ್ತದೆ. ಆದರೆ, ನಮ್ಮ ಸಮಾಜದಲ್ಲಿ ಇವತ್ತು ಕಣ್ಣು ಕಿವಿಗಳ ಬದಲು ಹರಿತ ನಾಲಿಗೆಗಳೇ ಕಾಣುತ್ತಿವೆ.
-ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ






.jpg)
.jpg)
.jpg)

