ಪ್ರಧಾನಿಯು ನಮ್ಮನ್ನು ವಿಭಜಿಸಲು ಮತ್ತು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ: ಆರೋಪಿಸಿದ ರೈತರು
“ನಾವು ಯಾವ ರಾಜಕೀಯ ಪಕ್ಷಕ್ಕೂ ವೇದಿಕೆ ನೀಡುವುದಿಲ್ಲ”

ಹೊಸದಿಲ್ಲಿ,ಡಿ.25: ಪ್ರಧಾನಿ ನರೇಂದ್ರ ಮೋದಿ ಇಂದು ಆರು ರಾಜ್ಯಗಳ ರೈತರನ್ನುದ್ದೇಶಿಸಿ ಮಾತನಾಡಿದ್ದರು. ಈ ಕುರಿತಾದಂತೆ ಪ್ರತಿಕ್ರಿಯೆ ನೀಡಿರುವ ಪ್ರತಿಭಟನಾ ನಿರತ ರೈತರ ಯೂನಿಯನ್, “ಪ್ರಧಾನಿ ನರೇಂದ್ರ ಮೋದಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ವಿಭಜಿಸಲು ಮತ್ತು ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ನಮಗೆ ಎಮ್ಎಸ್ಪಿ ಕುರಿತು ಕಾನೂನು ಖಾತರಿ ದೊರಕುವವರೆಗೆ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಹೇಳಿದ್ದಾಗಿ timesofindia.com ವರದಿ ಮಾಡಿದೆ.
ಇಂದು ಆರು ರಾಜ್ಯಗಳ ರೈತರನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ “ವಿರೋಧ ಪಕ್ಷಗಳು ರೈತರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ದಾರಿ ತಪ್ಪಿಸುತ್ತಿದೆ ಎಂಬ ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದ್ದರು. ಈ ಹೇಳಿಕೆಯ ವಿರುದ್ಧ ರೈತರು ಈ ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
“ಸರಕಾರವು ರೈತರ ವಿಚಾರವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ. ವಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿದೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. ಆದರೆ, ನಾವು ಇದುವರೆಗೂ ಯಾವುದೇ ರಾಜಕೀಯ ಪಕ್ಷಕ್ಕೂ ಕೂಡಾ ನಮ್ಮ ವೇದಿಕೆಯಲ್ಲಿ ಅವಕಾಶ ನೀಡಿಲ್ಲ. ಸರಕಾರವು ರೈತರನ್ನು ವಿಭಜಿಸುವ ಪ್ರಯತ್ನ ಮಾಡುತ್ತಿದೆ ಎಂದು ರೈತ ಮುಖಂಡ ಅಭಿಮನ್ಯು ಕೋಹರ್ ಹೇಳಿದ್ದಾರೆ.





