“ಪಿಎಂ-ಕೇರ್ಸ್ ಸಾರ್ವಜನಿಕ ಸಂಸ್ಥೆಯಾದರೂ, ಆರ್ ಟಿಐ ಕಾಯ್ದೆ ಅನ್ವಯವಾಗುವುದಿಲ್ಲ”
‘ಸರಕಾರದ ಹೊಸ ರಾಗ’

ಹೊಸದಿಲ್ಲಿ,ಡಿ.25: ಕೊರೋನ ವೈರಸ್ ವಿರುದ್ಧ ಹೋರಾಟಕ್ಕೆ ದೇಣಿಗೆಗಳನ್ನು ಸಂಗ್ರಹಿಸಲು ಸರಕಾರವೇ ಪಿಎಂ-ಕೇರ್ಸ್ ನಿಧಿಯನ್ನು ಸ್ಥಾಪಿಸಿದೆ ಮತ್ತು ಹೀಗಾಗಿ ಅದು ಸಾರ್ವಜನಿಕ ಸಂಸ್ಥೆಯಾಗಿದೆ ಎಂದು ಕೇಂದ್ರವು ನೂತನ ಆರ್‌ಟಿಐ ಉತ್ತರವೊಂದರಲ್ಲಿ ತಿಳಿಸಿದೆ. ತನ್ಮೂಲಕ ನಿಧಿಯು ಖಾಸಗಿಯಾಗಿದೆ ಎಂಬ ತನ್ನ ವೆಬ್‌ಸೈಟ್‌ನಲ್ಲಿಯ ಇತ್ತೀಚಿನ ಹೇಳಿಕೆಗೆ ಉಲ್ಟಾ ಹೊಡೆದಿದೆ.
ಪಿಎಂ ಕೇರ್ಸ್ ಭಾರತ ಸರಕಾರವು ಸ್ಥಾಪಿಸಿರುವ ಮತ್ತು ಅದರ ಒಡೆತನ ಹಾಗೂ ನಿಯಂತ್ರಣದಲ್ಲಿರುವ ಸಂಸ್ಥೆಯಾಗಿದೆ. ಆದರೆ ಅದು ಖಾಸಗಿ ದೇಣಿಗೆಗಳನ್ನು ಸ್ವೀಕರಿಸುವುದರಿಂದ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೊಳಪಡುವುದಿಲ್ಲ ಎಂದು ಸರಕಾರವು ಡಿ.24ರ ತನ್ನ ಆರ್‌ಟಿಐ ಉತ್ತರದಲ್ಲಿ ತಿಳಿಸಿದೆ.
ಆದರೆ ಮಾ.27ರಂದು ಸ್ಥಾಪನೆಯ ಸಂದರ್ಭ ಮಾಡಲಾಗಿದ್ದ ಟ್ರಸ್ಟ್ ಡೀಡ್‌ನಲ್ಲಿ,ಪಿಎಂ ಕೇರ್ಸ್ ನಿಧಿಯು ಸರಕಾರದ ಒಡೆತನದಲ್ಲಿಲ್ಲ ಮತ್ತು ಅದರಿಂದ ನಿಯಂತ್ರಿಸಲ್ಪಡುವುದಿಲ್ಲ ಎಂದು ಹೇಳಲಾಗಿದೆ.
ಅಧಿಕೃತ ದಾಖಲೆಗಳಲ್ಲಿ ವಿರೋಧಾಭಾಸಗಳು ಕಂಡು ಬಂದ ಬಳಿಕ ಈ ಟ್ರಸ್ಟ್ ಡೀಡ್ ಪಿಎಂ ಕೇರ್ಸ್ ನಿಧಿ ಕುರಿತ ಗೊಂದಲಗಳನ್ನು ಇನ್ನಷ್ಟು ತೀವ್ರಗೊಳಿಸಿದೆ. ವಿವಿಧ ದಾನಿಗಳಿಂದ ಸಾವಿರಾರು ಕೋ.ರೂಗಳನ್ನು ಸ್ವೀಕರಿಸುತ್ತಿರುವ ಇದನ್ನು ಈಗ ಸರಕಾರಿ ಸಂಸ್ಥೆಯೆಂದು ಗುರುತಿಸಲಾಗಿದೆ,ಆದರೆ ಇಂತಹ ಸಂಸ್ಥೆಗಳಿಗೆ ಅಗತ್ಯವಿರುವಂತೆ ಮಾಹಿತಿಗಳನ್ನು ಬಹಿರಂಗಪಡಿಸುವ ಬದ್ಧತೆಯಿಂದ ಹೊರಗಿರುವಂತಿದೆ.
ಪಿಎಂ ಕೇರ್ಸ್ ನಿಧಿಯನ್ನು ದಿಲ್ಲಿಯ ಕಂದಾಯ ಇಲಾಖೆಯಲ್ಲಿ ನೋಂದಣಿ ಮಾಡಲಾಗಿದೆ. ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿದ್ದು, ಹಿರಿಯ ಸಚಿವರು ಟ್ರಸ್ಟಿಗಳಾಗಿದ್ದಾರೆ. ಆದರೆ ಇತ್ತೀಚಿಗೆ ನಿಧಿಯ ವೆಬ್‌ಸೈಟ್‌ನಲ್ಲಿ ಬಹಿರಂಗಗೊಳಿಸಿರುವ ಟ್ರಸ್ಟ್ ಡೀಡ್‌ನಲ್ಲಿ ಅದನ್ನು ಸರಕಾರಿ ಟ್ರಸ್ಟ್ ಎಂದು ವ್ಯಾಖ್ಯಾನಿಸಲಾಗಿಲ್ಲ.
ನೋಂದಣಿಯಾದ ಮರುದಿನ ಕಾರ್ಪೊರೇಟ್ ದೇಣಿಗೆಗಳನ್ನು ಸ್ವೀಕರಿಸಲು ಅದನ್ನು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮವನ್ನಾಗಿ ಅರ್ಹವಾಗಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಅಧಿಕೃತ ಜ್ಞಾಪಕ ಪತ್ರವನ್ನು ಹೊರಡಿಸಿತ್ತು ಮತ್ತು ಇದು ಪಿಎಂ ಕೇರ್ಸ್ ಅನ್ನು ಸರಕಾರಿ ಸಂಸ್ಥೆಯನ್ನಾಗಿಸಿತ್ತು.
ಆದರೆ ಒಂದು ದಿನ ಮೊದಲಿನ ಟ್ರಸ್ಟ್ ಡೀಡ್‌ನಲ್ಲಿ ನಿಧಿಯು ಸರಕಾರದ ಸಂಸ್ಥೆಯಾಗಿರಲಿಲ್ಲ ಮತ್ತು ಅದು ಕಾರ್ಪೊರೇಟ್ ದೇಣಿಗೆಗಳನ್ನು ಸ್ವೀಕರಿಸಲು ಅರ್ಹವಾಗಿರಲಿಲ್ಲ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಮೇ 26ರಂದು ಪಿಎಂ ಕೇರ್ಸ್ ನಿಧಿಯನ್ನು ಮಾ.28ರಿಂದ ಪೂರ್ವಾನ್ವಯವಾಗಿ ಕಂಪನಿಗಳ ಕಾಯ್ದೆಯಡಿ ತರುವವರೆಗೆ ಸುಮಾರು ಎರಡು ತಿಂಗಳುಗಳ ಕಾಲ ಈ ವಿರೋಧಾಭಾಸವು ಮುಂದುವರಿದಿತ್ತು. ಅಂದರೆ ಈ ಅವಧಿಯಲ್ಲಿ ಪಿಎಮ್ ಕೇರ್ಸ್ ಖಾಸಗಿ ಸಂಸ್ಥೆಯಾಗಿದ್ದರೂ ಕಾರ್ಪೊರೇಟ್ ದೇಣಿಗೆಗಳನ್ನು ಸ್ವೀಕರಿಸಿತ್ತು.







