ಯಕ್ಷಗಾನ ಕಲಾರಂಗದಿಂದ ಮೂವರು ಸಾಧಕರಿಗೆ ಪ್ರಶಸ್ತಿ ಪ್ರದಾನ

ಉಡುಪಿ, ಡಿ.25: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ಛಂದಸ್ಸು ವಿದ್ವಾಂಸ ಗಣೇಶ್ ಕುಲಕಾಡಿಗೆ ‘ತಲ್ಲೂರು ಕನಕ ಅಣ್ಣಯ್ಯ’, ಹಿರಿಯ ಅರ್ಥಧಾರಿ ಸಾಂತೂರು ಸದಾಶಿವ ರಾವ್‌ಗೆ ‘ಮಟ್ಟಿ ಮುರಲೀಧರ ರಾವ್’, ಅರ್ಥಧಾರಿ ಎಂ.ಎನ್.ಹೆಗಡೆ ಯಲ್ಲಾಪುರಗೆ ‘ಪೆರ್ಲ ಕೃಷ್ಣ ಭಟ್’ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಯಿತು.
ಶುಕ್ರವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಕಲೆಗೆ ಪ್ರೋತ್ಸಾಹ ನೀಡುವುದರಿಂದ ಕಲಾವಿದರು ಇನ್ನಷ್ಟು ಉತ್ತಮವಾಗಿ ಕಲಾ ಸೇವೆ ಮಾಡಲು ಸಾಧ್ಯವಾ ಗುತ್ತದೆ. ನಮ್ಮಲ್ಲಿ ಗಂಗೆ ಯಂತೆ ನಿರಂತರವಾಗಿ ಒಳ್ಳೆಯ ಚಿಂತನೆಗಳು ಹರಿಯುತ್ತಿರಬೇಕು. ಇದರಿಂದ ಸಮಾಜ ಶ್ರೇಯಸ್ಸು ಸಾಧ್ಯ ಎಂದರು.
ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ತಲ್ಲೂರು ಶಿವರಾಂ ಶೆಟ್ಟಿ, ನಾರಾಯಣ ಹೆಗಡೆ, ಎಸ್.ವಿ.ಭಟ್ ಉಪಸ್ಥಿತರಿದ್ದರು.





