6 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನ ಲಸಿಕೆ ನೀಡಿದ ಬ್ರಿಟನ್

ಲಂಡನ್, ಡಿ. 25: ಫೈಝರ್ ಮತ್ತು ಬಯೋಎನ್‌ಟೆಕ್ ಕಂಪೆನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೋನ ವೈರಸ್ ಲಸಿಕೆಯನ್ನು 6 ಲಕ್ಷಕ್ಕೂ ಅಧಿಕ ಬ್ರಿಟಿಶ್ ನಾಗರಿಕರಿಗೆ ನೀಡಲಾಗಿದೆ ಎಂದು ಬ್ರಿಟನ್‌ನ ಆರೋಗ್ಯ ಇಲಾಖೆ ತಿಳಿಸಿದೆ.
‘‘ಸಾಗಣೆ ಮತ್ತು ಸಂಗ್ರಹಣೆಯ ಬೃಹತ್ ಸವಾಲುಗಳನ್ನು ಎದುರಿಸಲು ನ್ಯಾಶನಲ್ ಹೆಲ್ತ್ ಸರ್ವಿಸ್ (ಎನ್‌ಎಚ್‌ಎಸ್) ಮಾಡಿದ ತೀವ್ರ ಪ್ರಯತ್ನಗಳ ಫಲವಾಗಿ, ಬ್ರಿಟನ್‌ನಾದ್ಯಂತ 6,16,933 ಮಂದಿಗೆ ಕೊರೋನ ವೈರಸ್ ಲಸಿಕೆಯನ್ನು ನೀಡಲಾಗಿದೆ’’ ಎಂದು ಇಲಾಖೆಯು ಗುರುವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಇಂಗ್ಲೆಂಡ್‌ನಲ್ಲಿ 5.21 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾದರೆ, ಸ್ಕಾಟ್‌ಲ್ಯಾಂಡ್‌ನಲ್ಲಿ 56,000ಕ್ಕೂ ಅಧಿಕ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ವೇಲ್ಸ್‌ನಲ್ಲಿ 22,000ಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಯಿತು ಹಾಗೂ ನಾರ್ದರ್ನ್ ಐರ್‌ಲ್ಯಾಂಡ್‌ನಲ್ಲಿ 16,000ಕ್ಕೂ ಅಧಿಕ ಮಂದಿ ಸ್ವೀಕರಿಸಿದರು.
‘‘ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ಲಸಿಕೆ ನೀಡಿಕೆ ದರವನ್ನು ಹೆಚ್ಚಿಸಲಾಗುವುದು. ಆ ವೇಳೆಗೆ ಹೆಚ್ಚಿನ ಪ್ರಮಾಣದ ಲಸಿಕೆಗಳು ಲಭ್ಯವಾಗುತ್ತವೆ’’ ಎಂದು ಹೇಳಿಕೆ ತಿಳಿಸಿದೆ.







