ಕಮಲ್ ಹಾಸನ್ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿಜೆಪಿಗೆ ಸೇರ್ಪಡೆ
ಚೆನ್ನೈ,ಡಿ.26: ಖ್ಯಾತ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ರವರ ನೂತನ ಪಕ್ಷ ‘ಮಕ್ಕಳ್ ನೀದಿ ಮಯ್ಯಂ’ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಎ. ಅರುಣಾಚಲಮ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 2021ರ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಮ್ಮುಖದಲ್ಲಿ ಅರುಣಾಚಲಮ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ ಎಂದು Hindustantimes.com ವರದಿ ಮಾಡಿದೆ.
ಅರುಣಾಚಲಮ್ ರವರು ತಮಿಳುನಾಡಿನ ತೂತುಕುಡಿ ಜಿಲ್ಲೆಗೆ ಸೇರಿದವರಾಗಿದ್ದು, ಕಮಲ್ ಹಾಸನ್ ಪಕ್ಷದ ಪ್ರಚಾರ ನಡೆಸುತ್ತಿದ್ದ ನಡುವೆಯೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಚೆನ್ನೈನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ಜಾವಡೇಕರ್, “ತಮಿಳುನಾಡಿನಲ್ಲಿ ಎಲ್ಲ ಪಕ್ಷಗಳಿಗಿಂತ ಬಿಜೆಪಿಯು ಉತ್ತಮ ಸಾದನೆ ತೋರಲಿದೆ. ಈ ರಾಜ್ಯದಲ್ಲಿ ಹಲವು ಕೌಟುಂಬಿಕ ಪಕ್ಷಗಳು ಇದ್ದರೆ, ಬಿಜೆಪಿ ಪಕ್ಷವೇ ಒಂದು ಕುಟುಂಬವಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ಪಕ್ಷವು ಉತ್ತಮ ಸಾಧನೆ ತೋರಲಿದೆ ಎಂದು ಅವರು ಪುನರುಚ್ಛರಿಸಿದರು.
ಇನ್ನು, ಅರುಣಾಚಲಮ್ ರವರು ಬಿಜೆಪಿ ಪಕ್ಷ ಸೇರ್ಪಡೆಗೊಂಡಿರುವುದು ಕಮಲ್ ಹಾಸನ್ ರ ಮಕ್ಕಳ್ ನೀದಿ ಮಯ್ಯಂ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ.