ಉತ್ತರ ಪ್ರದೇಶ: ಹಿಂದೂ ಧರ್ಮಕ್ಕೆ ಮತಾಂತರಗೊಂಡು ವಿವಾಹವಾದ ಮುಸ್ಲಿಂ ಯುವತಿಯರು
ಪೊಲೀಸರ ‘ಮಧ್ಯವರ್ತಿಕೆ’ಯಲ್ಲಿ, ಸಂಘಪರಿವಾರದ ‘ರಕ್ಷಣೆ'ಯಲ್ಲಿ ನಡೆದ ವಿವಾಹ

ಬರೇಲ್ವಿ,ಡಿ.26: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡು ವಿವಾಹವಾದ ಘಟನೆಯು ಉತ್ತರಪ್ರದೇಶದ ಬರೇಲ್ವಿಯಲ್ಲಿ ನಡೆದಿದೆ. ಮದುವೆಗೆ ಸಂಘಪರಿವಾರ ಸಂಘಟನೆಗಳು ರಕ್ಷಣೆ ನೀಡಿವೆ ಎಂದು timesofindia.com ವರದಿ ಮಾಡಿದೆ.
ಪ್ರಥಮ ಪ್ರಕರಣವು ಬರೇಲ್ವಿಯ ಹಫೀಝ್ ಗಂಜ್ ನಲ್ಲಿ ನಡೆದಿದ್ದು, ಮೊದಲಿಗೆ ಯುವತಿಯ ಮನೆಯವರು ಪ್ರಕರಣ ದಾಖಲಿಸಿದ್ದು, ಯುವಕನ ವಿರುದ್ಧ ಅಪಹರಣ ಮತ್ತು ದರೋಡೆ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ ಪೊಲೀಸರು ಮಧ್ಯವರ್ತಿಗಳಾಗಿ ನಿಂತು ಸಂಧಾನ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಕುರಿತು ಮಾತನಾಡಿದ ಬರೇಲ್ವಿಯ ಮುಖ್ಯ ಪೊಲೀಸ್ ಅಧೀಕ್ಷಕ ರೋಹಿತ್ ಸಿಂಗ್ ಸಜ್ವಾನ್, “ಈ ಪ್ರಕರಣದಲ್ಲಿ ಇಬ್ಬರೂ ವಯಸ್ಕರಾಗಿರುವ ಕಾರಣ, ಇಲ್ಲಿ ಹೆಣ್ಣಿನ ಹೇಳಿಕೆಯನ್ನು ಪರಿಗಣಿಸಲಾಗಿದೆ. ಅವರಿಬ್ಬರೂ ನಮಗೆ ರಕ್ಷಣೆ ನೀಡಬೇಕೆಂದು ಪೊಲೀಸರನ್ನು ಕೋರಿದ್ದರು. ಬಳಿಕ ನಾವು ಎರಡೂ ಕುಟುಂಬಸ್ಥರನ್ನು ಕರೆಸಿ ಮಾತುಕತೆಯ ಮೂಲಕ ಸಂಧಾನ ನಡೆಸಿದ್ದೇವೆ. ಯಾರ ವಿರುದ್ಧವೂ ಪ್ರಕರಣ ದಾಖಲಿಸಲಾಗಿಲ್ಲ” ಎಂದು ಹೇಳಿಕೆ ನೀಡಿದ್ದಾಗಿ timesofindia.com ವರದಿ ತಿಳಿಸಿದೆ. ಗುರುವಾರದಂದು ರಿತೋರಾದಲ್ಲಿರುವ ದೇವಸ್ಥಾನವೊಂದರಲ್ಲಿ ಮದುವೆ ನಡೆದಿದ್ದು, ಸಂಘಪರಿವಾರ ಸಂಘಟನೆಗಳು ಸ್ಥಳದಲ್ಲಿ ಹಾಜರಿತ್ತು ಎಂದು ವರದಿ ತಿಳಿಸಿದೆ.
ಎರಡನೇ ಪ್ರಕರಣದಲ್ಲಿ 29ರ ಹರೆಯದ ಮುಸ್ಲಿಮ್ ಮಹಿಳೆಯೋರ್ವರು ಹಿಂದೂ ಯುವಕನೊಂದಿಗೆ ‘ಪರಾರಿ’ಯಾದ ಘಟನೆಯು ಬಹೇದಿ ಪ್ರದೇಶದಲ್ಲಿ ನಡೆದಿತ್ತು. ಬಳಿಕ ವೀಡಿಯೋ ಕ್ಲಿಪ್ ಬಿಡುಗಡೆಮಾಡಿದ್ದ ಅವರು, ತಾವು ವಿವಾಹವಾಗಿದ್ದಾಗಿ ಹೇಳಿಕೆ ನೀಡಿದ್ದರು. ಆದರೆ, ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದು, ಯುವಕನ ವಿರುದ್ಧ ದರೋಡೆ ಮತ್ತು ಅಪಹರಣಪ್ರಕರಣ ದಾಖಲಿಸಿದ್ದರು. ಮತಾಂತರ ವಿರೋಧಿ ಕಾಯ್ದೆಯ ಮೂಲಕ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, “ ನಾವು ಹೈಕೋರ್ಟ್ ನ ಆದೇಶವನ್ನು ಪಾಲಿಸುತ್ತಿದ್ದೇವೆ. ವಯಸ್ಕ ಜೋಡಿಯು ಪರಸ್ಪರ ಒಪ್ಪಿಗೆಯ ಮೂಲಕ ಮದುವೆಯಾದರೆ ಅವರ ನಡುವೆ ಕುಟುಂಬಗಳು ಹಸ್ತಕ್ಷೇಪ ಮಾಡುವಂತಿಲ್ಲ. ಅವರನ್ನು ಜೊತೆಯಾಗಿ ಬದುಕಲು ಅನುಮತಿಸಬೇಕು” ಎಂದು ಹೇಳಿಕೆ ನೀಡಿದ್ದಾರೆ.
ಉತ್ತರಪ್ರದೇಶದಲ್ಲಿ ಸದ್ಯ ಮತಾಂತರ ವಿರೋಧಿ ಕಾಯ್ದೆಯು ಜಾರಿಯಾದ ಬಳಿಕ ಹಲವಾರು ಮುಸ್ಲಿಂ ಯುವಕರು ಬಂಧನಕ್ಕೊಳಗಾಗಿದ್ದಾರೆ. ಮೊನ್ನೆ ತಾನೇ ನಡೆದ ಪ್ರಕರಣವೊಂದರಲ್ಲಿ ಜೊತೆಯಾಗಿ ಬದುಕುತ್ತಿದ್ದ ಜೋಡಿಗಳನ್ನು ಬೇರ್ಪಡಿಸಿದ ಪೊಲೀಸರು ಯುವತಿಯನ್ನು ಸೇವಾಶ್ರಮಕ್ಕೆ ಹಾಗೂ ಯುವಕನನ್ನು ಜೈಲಿಗೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಕಿರುಕುಳದ ಕಾರಣದಿಂದ ಯುವತಿಯ ಗರ್ಭಪಾತವೂ ನಡೆದಿತ್ತು.
ಇನ್ನೊಂದು ಪ್ರಕರಣದಲ್ಲಿ ಜೊತೆಯಾಗಿ ನಡೆಯುತ್ತಿದ್ದರು ಎಂಬ ಕಾರಣಕ್ಕೆ ಮುಸ್ಲಿಂ ಯುವಕನನ್ನು ಬಂಧಿಸಿದ ಪೊಲೀಸರು ಲೈಂಗಿಕ ದೌರ್ಜನ್ಯ, ಪೊಕ್ಸೋ ಪ್ರಕರಣವನ್ನೂ ದಾಖಲಿಸಿದ್ದರು. ನ್ಯಾಯಾಲಯದ ಆದೇಶವು ಎಲ್ಲಾ ಧರ್ಮಗಳಿಗೂ ಅನ್ವಯವಾಗದೇ ಕೇವಲ ಒಂದೇ ಧರ್ಮವನ್ನು ಗುರಿಯಾಗಿಸಿ ಕಾರ್ಯಾಚರಿಸುತ್ತಿರುವುದು ಸರಕಾರದ ದ್ವಿಮುಖ ಧೋರಣೆಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.







