ನಾನು ಹೋದ ಮೇಲೂ ಜೆಡಿಎಸ್ ಉಳಿಯಲಿದೆ: ಮಾಜಿ ಪ್ರಧಾನಿ ದೇವೇಗೌಡ
‘ನನ್ನ ಜಾತ್ಯತೀತತೆಯನ್ನು ಪ್ರಶ್ನಿಸಬೇಡಿ’

ಬೆಂಗಳೂರು, ಡಿ. 26: ‘ನಾನು ಇರುವಷ್ಟು ದಿನ ಮಾತ್ರವೇ ಅಲ್ಲ, ನಾನೂ ಹೋದ ಮೇಲೂ ಜೆಡಿಎಸ್ ಪಕ್ಷ ಉಳಿಯಲಿದೆ. ಅದಕ್ಕಾಗಿ ಹೋರಾಟ ಮಾಡಲಿದ್ದು, ಪಕ್ಷದಲ್ಲಿ ಇನ್ನೂ ಉಮ್ಮಸ್ಸಿರುವ ನಿಷ್ಟಾವಂತ ಕಾರ್ಯಕರ್ತರಿದ್ದು, ಪಕ್ಷವನ್ನು ಮತ್ತಷ್ಟು ಸದೃಢವಾಗಿ ಸಂಘಟಿಸಲಿದ್ದೇವೆ’ ಎಂದು ಜೆಡಿಎಸ್ ವರಿಷ್ಟ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಹೇಳಿದ್ದಾರೆ.
ಶನಿವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮ ಗೋಷ್ಟಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆ ಶಿರಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋತ ಬಳಿಕ ನನಗೆ ತುಂಬಾ ನೋವಾಗಿದೆ. ಪಕ್ಷದಲ್ಲಿ ಇನ್ನೂ ಉತ್ಸಹವಿರುವ ಕಾರ್ಯಕರ್ತರಿದ್ದು ಅವರಿಗೆ ಸೂಕ್ತ ಜವಾಬ್ದಾರಿ ನೀಡಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಮುಂದಾಗಲಾಗುವುದು ಎಂದರು.
ಅವರು ಹೋಗುವುದು ಬೇಡ: ನಾವು ಬೇರೆ ಪಕ್ಷಗಳಿಂದ ಕರೆದುಕೊಂಡು ಬಂದು ಚುನಾವಣೆಗೆ ನಿಲ್ಲಿಸುವುದು, ಅವರು ಗೆದ್ದ ಬಳಿಕ ಬೇರೆ ಪಕ್ಷಗಳಿಗೆ ಪುನಃ ಹೋಗುವುದು ಬೇಡ. 2021ರ ಜನವರಿ 7ರಂದು ಅರಮನೆ ಮೈದಾನದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಇದೆ. ಆ ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಾರೆ. ಸಂಕ್ರಾಂತಿ ಬಳಿಕ ಕುಮಾರಸ್ವಾಮಿ ತಮ್ಮದೇ ಆಲೋಚನೆಗಳ ಮೂಲಕ ಪಕ್ಷ ಸಂಘಟನೆಯನ್ನು ಮುಂದುವರಿಸಲಿದ್ದಾರೆ ಎಂದು ದೇವೇಗೌಡ ಪ್ರಕಟಿಸಿದರು.
ಜೆಡಿಎಸ್ ಅಲುಗಾಡಿಸಲು ಸಾಧ್ಯವಿಲ್ಲ: ಬಿಜೆಪಿ, ಕಾಂಗ್ರೆಸ್ ಸೇರಿದಂತೆ ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ. ಆದರೆ, ನಮಗೆ ಯಾವುದೇ ಹೈಕಮಾಂಡ್ ಇಲ್ಲ. ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗಲು ಸಾಧ್ಯವಿಲ್ಲ, ವಯಸ್ಸಿಗೆ ತಕ್ಕಂತೆ ನನ್ನ ಕೆಲಸ ಮಾಡುತ್ತೇನೆ. ಜೆಡಿಎಸ್ ಮನೆಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ದೇವೇಗೌಡ ಇದೇ ವೇಳೆ ಗುಡುಗಿದರು.
ಪ್ರಾದೇಶಿಕ ಪಕ್ಷವನ್ನು ಉಳಿಸಿಕೊಳ್ಳಲು ಎಷ್ಟು ಕಷ್ಟ ಎನ್ನುವುದು ಅದರ ಮುಖ್ಯಸ್ಥರಿಗೆ ಮಾತ್ರ ಗೊತ್ತು. ಜೆಡಿಎಸ್ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎಂದು ಬಹಳ ಜನ ಹೇಳುತ್ತಾರೆ. ಆದರೆ, ತೆನೆ ಹೊತ್ತ ರೈತ ಮಹಿಳೆಗೆ ಏನೆಲ್ಲಾ ಅವಮಾನ ಮಾಡುತ್ತಿದ್ದಾರೆಂದು ಗೊತ್ತಿದೆ. ಆದರೆ, ಪ್ರಧಾನಿ ಮೋದಿ ‘ಕಾಂಗ್ರೆಸ್ ಮುಕ್ತ ಭಾರತ’ ಎಂದರು ಆಗ ನಾವು ಅವರ ಜೊತೆಗೆ ನಿಂತಿದ್ದೆವು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಎಲ್ಲರೂ ನನ್ನನ್ನು ಹೊರ ಹಾಕಿದ್ದಾರೆ. ಏಕಾಂಕಿಯಾಗಿದ್ದೆ, ಯಾರ ಹೆಸರನ್ನೂ ಹೇಳುವುದಲ್ಲ. ಆದರೆ, ಅವರೆಲ್ಲರೂ ಪುನಃ ನನ್ನ ಬಳಿಗೆ ಬಂದಿದ್ದಾರೆ. ಆದರೆ, ಯಾರೂ ನನಗೆ ಹತ್ತು ರೂಪಾಯಿ ಕೊಟ್ಟಿಲ್ಲ. ಒಬ್ಬ ಕನ್ನಡಿಗ ಪ್ರಧಾನಿ ಆಗುವಂತಹ ಪರಿಸ್ಥಿತಿ ಬಂತು. ಆಗ ನಾನು ಪ್ರಧಾನಿ ಆಕಾಂಕ್ಷಿಯಾಗಿರಲಿಲ್ಲ, ಅಪೇಕ್ಷೆಯೂ ಇರಲಿಲ್ಲ, ಅದು ವಿಧಿ, ನನ್ನ ರಾಜೀನಾಮೆ ನಂತರ ನನ್ನನ್ನು ಬಿಟ್ಟು ಸರಕಾರ ರಚನೆ ಮಾಡಿದರೂ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ನನ್ನ ‘ಜಾತ್ಯತೀತತೆ’ ಪ್ರಶ್ನೆ: ಸಭಾಪತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವರು ನನ್ನ ‘ಜಾತ್ಯತೀತತೆ’ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡಿದವರು 130 ಸ್ಥಾನಗಳಿಂದ 78ಕ್ಕೆ ಕುಸಿದಿದ್ದು ಏಕೆ ಎಂದು ಪ್ರಶ್ನಿಸಿದ ದೇವೇಗೌಡ, ನಮ್ಮಿಂದಾಗಿ ಅವರು ಸ್ಥಾನ ಕಳೆದುಕೊಂಡಿದ್ದಾರೆಂದು ಹೇಳುತ್ತಿದ್ದಾರೆ. ಆದರೆ, ಹಾಸನ ಜಿಲ್ಲೆ ಕಾಂಗ್ರೆಸ್ ಸ್ಥಿತಿ ಏನಾಗಿದೆ. ನನ್ನ ಜಾತ್ಯತೀತತೆ ಪ್ರಶ್ನೆ ಮಾಡಬೇಡಿ ಎಂದು ತಿರುಗೇಟು ನೀಡಿದರು.







