ಉತ್ತರಪ್ರದೇಶ: ಮತಾಂತರ ನಿಷೇಧ ಕಾಯ್ದೆಯಡಿ ಒಂದು ತಿಂಗಳಲ್ಲಿ 35 ಮಂದಿಯ ಬಂಧನ

ಲಕ್ನೋ,ಡಿ.26: ತಿಂಗಳ ಹಿಂದೆ ವಿವಾದಾತ್ಮಕ ಮತಾಂತರ ವಿರೋಧಿ ಅಧ್ಯಾದೇಶವು ಜಾರಿಗೆ ಬಂದ ನಂತರ ಉತ್ತರ ಪ್ರದೇಶ ಪೊಲೀಸರು ದಿನಕ್ಕೆ ಒಂದಕ್ಕಿಂತಲೂ ಹೆಚ್ಚಿನ ಬಂಧನಗಳನ್ನು ನಡೆಸಿದ್ದು,ಈವರೆಗೆ 35 ಜನರನ್ನು ಬಂಧಿಸಿದ್ದಾರೆ. ನ.27ರಂದು ‘ಅಕ್ರಮ ಮತಾಂತರ ತಡೆ ವಿಧೇಯಕ,2020’ರ ಅಧಿಸೂಚನೆ ಹೊರಬಿದ್ದಾಗಿನಿಂದ ಈವರೆಗೆ ಸುಮಾರು 12 ಎಫ್‌ಆರ್‌ಗಳನ್ನು ದಾಖಲಿಸಲಾಗಿದೆ.
ಇಟಾದಲ್ಲಿ ಎಂಟು,ಸಿತಾಪುರದಲ್ಲಿ ಏಳು,ಗ್ರೇಟರ್ ನೊಯ್ಡದಲ್ಲಿ ನಾಲ್ಕು, ಶಾಹಜಹಾನ್‌ಪುರ ಮತ್ತು ಅಝಮ್‌ಗಡಗಳಲ್ಲಿ ತಲಾ ಮೂವರು, ಮೊರಾದಾಬಾದ್, ಬಿಜ್ನೋರ್ ಮತ್ತು ಕನೌಜ್‌ಗಳಲ್ಲಿ ತಲಾ ಇಬ್ಬರು ಹಾಗೂ ಬರೇಲಿ ಮತ್ತು ಹರ್ದೋಯಿಗಳಲ್ಲಿ ತಲಾ ಓರ್ವ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಇಲ್ಲಿ ತಿಳಿಸಿದರು. ಕಾನೂನು ಜಾರಿಗೆ ಬಂದ ಮರುದಿನವೇ ಬರೇಲಿಯಲ್ಲಿ ಮೊದಲ ಬಂಧನ ನಡೆದಿತ್ತು. 20ರ ಹರೆಯದ ಯುವತಿಯ ತಂದೆಯಾಗಿರುವ ಬರೇಲಿಯ ಶರೀಫ್ ನಗರ ಗ್ರಾಮದ ನಿವಾಸಿಯ ದೂರಿನ ಮೇರೆಗೆ ಪೊಲೀಸರು ನೂತನ ಕಾನೂನಿನ ಅಸ್ತ್ರವನ್ನು ಪ್ರಯೋಗಿಸಿದ್ದರು. ತನ್ನ ಪುತ್ರಿಯ ಜೊತೆ ಸ್ನೇಹ ಬೆಳೆಸಿಕೊಂಡಿರುವ ಉವೈಶ್ ಅಹ್ಮದ್(22) ಎಂಬಾತ ಆಕೆಯ ಮತಾಂತರಕ್ಕೆ ಆಮಿಷವನ್ನೊಡ್ಡಲು ಮತ್ತು ಬಲವಂತಗೊಳಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಡಿ.3ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಅಂತರ್‌ಧರ್ಮೀಯ ವಿವಾಹಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಲಕ್ನೋ ಪೊಲೀಸರು ನಗರದಲ್ಲಿ ನಡೆಯಲಿದ್ದ ವಿವಾಹ ಸಮಾರಂಭವೊಂದನ್ನು ನಿಲ್ಲಿಸಿದ್ದರು ಮತ್ತು ಕಾನೂನು ಅಗತ್ಯಗಳನ್ನು ಮೊದಲು ಪೂರೈಸುವಂತೆ ಜೋಡಿಗೆ ತಿಳಿಸಿದ್ದರು. ವಿವಾಹಿತ ಮಹಿಳೆಯನ್ನು ಮತಾಂತರಗೊಳ್ಳುವಂತೆ ಬಲವಂತಗೊಳಿಸಿದ್ದಕ್ಕಾಗಿ ಡಿ.6ರಂದು ಮುಝಫ್ಫರ್‌ನಗರದಲ್ಲಿ ನದೀಂ ಎಂಬಾತನನ್ನು ಮತ್ತು ಆತನ ಸಹಚರನನ್ನು ಬಂಧಿಸಲಾಗಿತ್ತು. ನದೀಂ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಪೊಲೀಸರಿಗೆ ಆದೇಶದ ಬಳಿಕ ಆತ ಬಿಡುಗಡೆಯ ನಿಟ್ಟುಸಿರೆಳೆದಿದ್ದ. ಇದೇ ರೀತಿ ಮೊರಾದಾಬಾದ್‌ನಲ್ಲಿ ಮತಾಂತರ ನಿಗ್ರಹ ಕಾನೂನಿನಡಿ ಬಂಧಿಸಲ್ಪಟ್ಟಿದ್ದ ಇಬ್ಬರು ಸೋದರರು ಸಿಜೆಎಂ ನ್ಯಾಯಾಲಯದ ಆದೇಶದ ಮೇರೆಗೆ ಬಿಡುಗಡೆಗೊಂಡಿ ದ್ದರು.
ರಶೀದ್ ಎಂಬಾತ ಹಿಂದು ಮಹಿಳೆಯೊಡನೆ ತನ್ನ ಮದುವೆಯನ್ನು ನೋಂದಾಯಿಸಲು ಮೊರಾದಾಬಾದ್‌ನ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದಾಗ ಆತನನ್ನು ಮತ್ತು ಜೊತೆಯಲ್ಲಿದ್ದ ಸಲೀಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಮಹಿಳೆಯ ಕುಟುಂಬವು ಪೊಲೀಸರಲ್ಲಿ ದೂರು ದಾಖಲಿಸಿತ್ತು. ಡಿ.3ರಂದು ಮೌ ಜಿಲ್ಲೆಯಲ್ಲಿ ವಿವಾಹಿತ ಶಬಾಬ್ ಖಾನ್ ಅಲಿಯಾಸ್ ರಾಹುಲ್(38) ಎಂಬಾತನನ್ನು ಬಂಧಿಸಿದ್ದ ಪೊಲೀಸರು,27ರ ಹರೆಯದ ಹಿಂದು ಮಹಿಳೆಯ ಮತಾಂತರದ ಉದ್ದೇಶದಿಂದ ಆಕೆಯನ್ನು ಮದುವೆಯ ಮುನ್ನಾದಿನವಾದ ನ.30ರಂದು ಅಪಹರಿಸಿದ್ದ ಆರೋಪದಲ್ಲಿ ಆತನ 13 ಸಹಚರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.







