ಎರಡನೇ ಟೆಸ್ಟ್: ಮೊದಲ ದಿನದಾಟದಲ್ಲಿ ಭಾರತ ತಂಡ ಮೆರೆದಾಟ

ಮೆಲ್ಬೋರ್ನ್: ಕ್ರಿಸ್ಮಸ್ ಮರುದಿನ ಆರಂಭವಾಗಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯವನ್ನು 195 ರನ್ ಗಳಿಗೆ ನಿಯಂತ್ರಿಸಿರುವ ಭಾರತ ತನ್ನ ಮೊದಲ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ.
ಚೊಚ್ಚಲ ಪಂದ್ಯವನ್ನಾಡಿರುವ ಶುಭಮನ್ ಗಿಲ್ ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸಿದರು. ಅಗರ್ವಾಲ್ ಮೊದಲ ಓವರ್ ನ ಕೊನೆಯ ಎಸೆತದಲ್ಲಿ ಖಾತೆ ತೆರೆಯುವ ಮೊದಲೇ ಮಿಚೆಲ್ ಸ್ಟಾರ್ಕ್ ಬೀಸಿದ ಎಲ್ಬಿಡಬ್ಲು ಬಲೆ ಬಿದ್ದರು.
ಅಗರ್ವಾಲ್ ಔಟಾದ ಬಳಿಕ ಗಿಲ್ ಹಾಗೂ ಚೇತೇಶ್ವರ ಪೂಜಾರ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿ ಭಾರತವು ಮತ್ತೆ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡರು. ಭಾರತವು ಮೊದಲ ದಿನದಾಟದಂತ್ಯಕ್ಕೆ 11 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ.
ಗಿಲ್ 38 ಎಸೆತಗಳನ್ನು ಎದುರಿಸಿ 5 ಬೌಂಡರಿಗಳ ಸಹಿತ ಔಟಾಗದೆ 28 ರನ್ ಗಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ಜಸ್ಪ್ರಿತ್ ಬುಮ್ರಾ, ಆರ್.ಅಶ್ವಿನ್ ಹಾಗೂ ಸಿರಾಜ್ ಬೌಲಿಂಗ್ ದಾಳಿಗೆ ತತ್ತರಿಸಿ 195 ರನ್ ಗೆ ಆಲೌಟಾಯಿತು.







