ಮತದಾರರಿಂದಲೇ ಚುನಾವಣಾ ವೆಚ್ಚ : ಪಂಜದಲ್ಲೊಂದು ಮಾದರಿ ಪ್ರಯೋಗ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.27ರಂದು ನಡೆಯಲಿರುವ ಎರಡನೆ ಹಂತದ ಗ್ರಾಮ ಪಂಚಾಯತ್ ಚುನಾವಣೆಗೆ ಪ್ರಚಾರ ಒಂದು ಕಡೆ ನಡೆಯುತ್ತಿದ್ದರೆ. ಸುಳ್ಯದ ಪಂಜ ಗ್ರಾಮದಲ್ಲಿ ಮತದಾರರೆ ಸೇರಿ ತಮ್ಮ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ನಿಭಾಯಿಸುತ್ತಿರುವುದು ಜಿಲ್ಲೆಯ ಗ್ರಾಮ ಪಂಚಾಯತ್ ಚುನಾವಣಾ ಕಣದಲ್ಲೊಂದು ಹೊಸ ಮಾದರಿಯಾಗಿದೆ.
ಸಾಕ್ಷರತಾ ಚಳವಳಿ, ಗಾಂಧಿ ಗ್ರಾಮ ಸ್ವರಾಜ್ಯದ ನೈಜ ಆಶಯವನ್ನು ಕಾರ್ಯಗತಗೊಳಿಸಬೇಕು ಎನ್ನುವ ಆಶಯದೊಂದಿಗೆ ಕಾರ್ಯ ಪ್ರವೃತ್ತರಾಗಿರುವ ಈ ಗ್ರಾಮದ ಗ್ರಾಮಸ್ಥರ ತಂಡವೊಂದು ಈ ಪ್ರಯತ್ನಕ್ಕೆ ಕೈ ಹಾಕಿದೆ. ಪಂಜ ಗ್ರಾಮ ಪಂಚಾಯತ್‌ನ ಐವತೊಕ್ಲೂ ಮತ್ತು ಕೂತ್ಕೂಂಜ ವಾರ್ಡ್ ಗಳಲ್ಲಿ ಐದು ಅಭ್ಯರ್ಥಿಗಳು ಈ ರೀತಿ ನೇರವಾಗಿ ಸ್ಪರ್ಧೆಗಿಳಿದಿದ್ದಾರೆ. ಇವರಲ್ಲಿ ಎಲ್ಲರೂ ಪ್ರಥಮ ಬಾರಿಗೆ ಗ್ರಾಮ ಪಂಚಾಯತ್‌ಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು. ಯಾವೂದೇ ಪಕ್ಷದ ರಾಜಕೀಯದಿಂದ ಮತ್ತು ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ ತಾವು ಚುನಾವಣೆ ಎದುರಿಸುತ್ತಿಲ್ಲ. ನಮ್ಮ ಮತದಾರರೆ ನಮ್ಮನ್ನು ಅಭ್ಯರ್ಥಿಯಾಗಿ ನಿಲ್ಲಿಸಬೇಕು. ಅವರಿಂದಲೇ ನಮ್ಮ ಆಯ್ಕೆ ನಡೆಯಬೇಕು. ಗ್ರಾಮ ಪಂಚಾಯುತ್‌ನಲ್ಲಿ ಗ್ರಾಮದ ಜನರ ಒಗ್ಗ ಟ್ಟು, ಸಮಗ್ರ ಅಭಿವೃದ್ಧಿ ಮುಖ್ಯ ಗುರಿ ಎನ್ನುವುದು ನಮ್ಮ ಉದ್ದೇಶ. ಈ ನಡುವೆ ಯಾವೂದೇ ರೂಪ ದಲ್ಲೂ ಪಕ್ಷ ರಾಜಕಾರಣ ನುಸುಳ ಬಾರದು ಎನ್ನುವುದು ನಮ್ಮ ಗುರಿ.ನಮ್ಮ ಗ್ರಾಮದಲ್ಲಿ ಎಲ್ಲರಿಗೂ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಇರುವಂತೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವೂ ಇದೆ ಎನ್ನುವುದನ್ನು ನಾವು ತೋರಿಸಿ ಕೊಡುತ್ತಿದ್ದೇವೆ. ಇದೊಂದು ಚುನಾವಣಾ ಜಾಗೃತಿಯ ಕಾರ್ಯಕ್ರಮವೂ ಹೌದು.
ಒಬ್ಬರಿಗೆ ಒಂದು ಅವಧಿಗೆ ಮಾತ್ರ ಅವಕಾಶ ನೀಡಬೇಕು ಆಗ ಹೆಚ್ಚು ಜನರು ಪಂಚಾಯತ್ ಸದಸ್ಯರಾಗಲೂ ಅವಕಾಶ ನೀಡಿದಂತಾಗುತ್ತದೆ. ನಮ್ಮ ಗ್ರಾಮಗಳಲ್ಲಿ ಇನ್ನೂ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ ಆಗದೆ ಇರುವ ಪ್ರದೇಶಗಳಿವೆ .ಅಲ್ಲಿ ಸಾಕಷ್ಟು ಕೆಲಸಗಳಿವೆ ಅವುಗಳನ್ನು ನಾವು ಗೆದ್ದರೆ ಪ್ರಥಮ ಆದ್ಯತೆಯೊಂದಿಗೆ ಮಾಡಬೇಕು ಎನ್ನುವ ಇಚ್ಛೆ ಇದೆ.ಒಂದು ವೇಳೆ ಸೋತರು ನಾವು ಗ್ರಾಮಕ್ಕಾಗಿ ಐದು ವರ್ಷ ದುಡಿಯುವ ಪ್ರತಿಜ್ಞೆಯೊಂದಿಗೆ ಚುನಾವಣೆಗೆ ನಿಂತಿದ್ದೇವೆ ಎನ್ನುವುದು ಕಣದಲ್ಲಿರುವ ಅಭ್ಯರ್ಥಿಗಳ ಇಂಗಿತವಾಗಿದೆ.
ತಂಡದ ಮಾರ್ಗದರ್ಶಕರಾದ ಪಂಜದ ಪುರುಷೋತ್ತಮ ಮೂಡೂರು ಹೇಳುವಂತೆ ‘‘ಇತ್ತೀಚೆಗೆ ಗ್ರಾಮ ಪಂಚಾಯತ್ ಅಭ್ಯರ್ಥಿಗಳನ್ನು ಬಹಿರಂಗ ಹರಾಜಿನಿಂದ ಆಯ್ಕೆ ಮಾಡುವ ಪ್ರಕರಣವೊಂದು ದೇಶದಲ್ಲಿ ಒಂದು ಕಡೆ ನಡೆದಿರುವ ಯತ್ನ ನಡೆದಿರುವ ಸುದ್ದಿ ಕೇಳಿದಾಗ ,ಗ್ರಾಮ ಸ್ವರಾಜ್ಯದ ದಿಕ್ಕು ತಪ್ಪಿಸುವ ವ್ಯವಸ್ಥೆ ಬಲಗೊಳ್ಳುತ್ತಿರುವುದು ಸ್ಪಷ್ಟವಾಗ ತೊಡಗಿತು.ಈ ಹಿನ್ನಲೆಯಲ್ಲಿ ಭ್ರಷ್ಟಾಚಾರ ಮುಕ್ತ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಗ್ರಾಮ ಜನರಲ್ಲಿ ಗಟ್ಟಿಗೊಳಿಸಲು ಚುನಾವಣಾ ಅಕ್ರಮಗಳನ್ನು ತಡೆಯಲು ,ತಮ್ಮ ಸ್ವಂತ ಹಣವನ್ನು ಖರ್ಚು ಮಾಡದೆ,ಗ್ರಾಮದ ಮತದಾರರು ನೀಡುವ ಹಣವನ್ನು ಸಂಗ್ರಹಿಸಿ ಒಟ್ಟು ಮಾಡಿ ಕನಿಷ್ಟ ವೆಚ್ಚದಲ್ಲಿ ಚುನಾವಣೆಯನ್ನು ಎದುರಿಸುವುದು. ಸೋತರು ಗ್ರಾಮ ಅಭಿವೃದ್ಧಿಗೆ ಐದು ವರ್ಷ ಕೆಲಸ ಮಾಡುವ ಪಣತೊಟ್ಟು ಗ್ರಾಮ ಸ್ವರಾಜ್ಯ ಚಳವಳಿಯ ಭಾಗವಾಗಿ ಅಭ್ಯರ್ಥಿಗಳು ಚುನಾವಣೆಗೆ ನಿಂತಿದ್ದಾರೆ.’’ ಎನ್ನುತ್ತಾರೆ.







