ಕೇಂದ್ರ ಸರಕಾರದೊಂದಿಗೆ ಮಾತುಕತೆ ಮುಂದುವರಿಸಲು ರೈತ ನಾಯಕರ ನಿರ್ಧಾರ

ಹೊಸದಿಲ್ಲಿ,ಡಿ.26: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ದಿಲ್ಲಿಯ ವಿವಿಧ ಗಡಿ ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ರೈತ ಸಂಘಟನೆಗಳು,ಬಿಕ್ಕಟ್ಟನ್ನು ಬಗೆಹರಿಸಲು ಡಿ.29ರಂದು ಸರಕಾರದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲು ನಿರ್ಧರಿಸಿವೆ. 40 ರೈತ ಸಂಘಟನೆಗಳ ಒಕ್ಕೂಟವಾಗಿರುವ ಸಂಯುಕ್ತ ಕಿಸಾನ್ ಮೋರ್ಚಾದ ಶನಿವಾರದ ಸಭೆಯಲ್ಲಿ ಈ ನಿರ್ಧಾರ ಮೂಡಿಬಂದಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ನಾಯಕರು ಸರಕಾರದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಲು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ವಿಧಿವಿಧಾನಗಳು ಮತ್ತು ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗೆ ಖಾತರಿ ಇವು ಕಾರ್ಯಸೂಚಿಯ ಭಾಗವಾಗಿರಬೇಕು ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಡಿ.30ರಂದು ಕುಂಡ್ಲಿ-ಮನೇಸರ್-ಪಲ್ವಾಲ್(ಕೆಎಂಪಿ) ಹೆದ್ದಾರಿಯಲ್ಲಿ ಬೃಹತ್ ಟ್ರಾಕ್ಟರ್ ರ್ಯಾಲಿಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ರೈತ ನಾಯಕ ದರ್ಶನ ಪಾಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೊಸ ವರ್ಷವನ್ನು ಪ್ರತಿಭಟನಾನಿರತ ರೈತರೊಂದಿಗೆ ಆಚರಿಸಲು ಬರುವಂತೆ ದಿಲ್ಲಿ ಮತ್ತು ದೇಶದ ಇತರ ಭಾಗಗಳ ಜನತೆಯನ್ನು ಅವರು ಕೋರಿಕೊಂಡರು.
‘ಕೆಎಂಪಿ ಹೆದ್ದಾರಿಯಲ್ಲಿ ಸಿಂಘುದಿಂದ ಟಿಕ್ರಿವರೆಗೆ ನಾವು ಜಾಥಾ ನಡೆಸಲಿದ್ದೇವೆ. ತಮ್ಮ ಟ್ರಾಕ್ಟರ್‌ಗಳು ಮತ್ತು ಟ್ರಾಲಿಗಳೊಂದಿಗೆ ಭಾರೀ ಸಂಖ್ಯೆಯಲ್ಲಿ ಆಗಮಿಸುವಂತೆ ನಾವು ಸುತ್ತಲಿನ ರಾಜ್ಯಗಳ ರೈತರಿಗೆ ಸೂಚಿಸಿದ್ದೇವೆ. ನಾವು ಕೆಎಂಪಿ ಹೆದ್ದಾರಿಯಲ್ಲಿ ತಡೆಯನ್ನುಂಟು ಮಾಡಬಾರದು ಎಂದು ಸರಕಾರವು ಬಯಸಿದ್ದರೆ ಅದು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಬೇಕು ’ಎಂದು ಇನ್ನೋರ್ವ ರೈತ ನಾಯಕ ರಾಜಿಂದರ್ ಸಿಂಗ್ ಹೇಳಿದರು.
ಡಿ.29ರಂದು ಸರಕಾರದೊಂದಿಗೆ ಮಾತುಕತೆಗೆ ಸಿದ್ಧ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ ಅಗರವಾಲ್ ಅವರಿಗೆ ರೈತ ನಾಯಕರು ಪತ್ರವನ್ನು ಬರೆದಿದ್ದಾರೆ. ‘ಚೆಂಡು ಈಗ ಸರಕಾರದ ಅಂಗಳದಲ್ಲಿದೆ. ನಮ್ಮನ್ನು ಯಾವಾಗ ಮಾತುಕತೆಗೆ ಕರೆಯಬೇಕು ಎನ್ನುವುದನ್ನು ಅದು ನಿರ್ಧರಿಸಬೇಕು ’ ಎಂದು ಭಾರತೀಯ ಕಿಸಾನ್ ಯೂನಿಯನ್‌ನ ನಾಯಕ ರಾಕೇಶ ಟಿಕಾಯತ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಪತ್ರದಲ್ಲಿ ತಿಳಿಸಿರುವಂತೆ,ರೈತರನ್ನು ದಂಡದ ವ್ಯಾಪ್ತಿಯಿಂದ ಹೊರಗಿಡಲು ರಾಷ್ಟ್ರ ರಾಜಧಾನಿ ಪ್ರದೇಶ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗಾಗಿ ಆಯೋಗ ವಿಧೇಯಕ,2020ರಲ್ಲಿ ಮಾಡಬೇಕಾದ ಹಾಗೂ ಅಧಿಸೂಚಿಸ ಬೇಕಾದ ತಿದ್ದುಪಡಿಗಳು ಪ್ರತಿಭಟನಾನಿರತ ರೈತ ಸಂಘಟನೆಗಳು ಪ್ರಸ್ತಾವಿಸಿರುವ ಕಾರ್ಯಸೂಚಿಯಲ್ಲಿ ಸೇರಿವೆ. ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಕರಡು ವಿದ್ಯುತ್ ತಿದ್ದುಪಡಿ ಮಸೂದೆ 2020ರಲ್ಲಿ ಬದಲಾವಣೆಗಳೂ ಮುಂದಿನ ಸುತ್ತಿನ ಮಾತುಕತೆಗಳ ಕಾರ್ಯಸೂಚಿಯ ಭಾಗವಾಗಿರಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ.







