ಉಡುಪಿ: 3 ತಾಲೂಕಿನ 86 ಗ್ರಾಪಂಗಳ 1209 ಸ್ಥಾನಗಳಿಗೆ ಚುನಾವಣೆ

ಉಡುಪಿ, ಡಿ.26: ಕೊರೋನ ಭೀತಿಯ ಮಧ್ಯೆ ಡಿ.27ರಂದು ಜಿಲ್ಲೆಯ ಮೂರು ತಾಲೂಕುಗಳ ಒಟ್ಟು 86 ಗ್ರಾಪಂಗಳಲ್ಲಿ ಎರಡನೆ ಹಂತದ ಚುನಾ ವಣೆಯನ್ನು ಕೋವಿಡ್-19 ನಿಯಮ ಪಾಲನೆಯೊಂದಿಗೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದ್ದು, ಈ ಸಂಬಂಧ ಕುಂದಾಪುರ, ಕಾಪು, ಕಾರ್ಕಳ ತಾಲೂಕುಗಳಲ್ಲಿ ಇಂದು ಮಸ್ಟರಿಂಗ್ ಕಾರ್ಯ ನಡೆಯಿತು.
ಜಿಲ್ಲೆಯಲ್ಲಿ ಮೂರು ತಾಲೂಕುಗಳ ಒಟ್ಟು 86 ಗ್ರಾಪಂಗಳ 444 ಕ್ಷೇತ್ರ ಗಳಲ್ಲಿ ಈಗಾಗಲೇ 65 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಯಾಗಿರುವುದರಿಂದ 1209 ಸ್ಥಾನಗಳಿಗೆ ಒಟ್ಟು 593 ಮತಗಟ್ಟೆಗಳಲ್ಲಿ ಮತ ದಾನ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 2708 ಮಂದಿ ಅಭ್ಯರ್ಥಿ ಗಳು ಕಣದಲ್ಲಿದ್ದು, 4,13,823 ಮಂದಿ ಮತದಾರರ ಮತ ಚಲಾಯಿಸಲಿದ್ದಾರೆ.
ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜು, ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜುಗಳಲ್ಲಿರುವ ಮಸ್ಟರಿಂಗ್ ಕೇಂದ್ರಗಳಿಂದ ಅಧಿಕಾರಿಗಳು ಸಿಬ್ಬಂದಿಗಳು ಬ್ಯಾಲೆಟ್ ಪೇಪರ್, ಮತಪೆಟ್ಟಿಗೆ ಹಾಗೂ ಪರಿಕರಗಳೊಂದಿಗೆ ಪೊಲೀಸ್ ಭದ್ರತೆಯಲ್ಲಿ ವ್ಯವಸ್ಥೆಗೊಳಿಸಿದ ವಾಹನಗಳಲ್ಲಿ ತಮ್ಮ ತಮ್ಮ ಮತಗ್ಟೆ ಗಳಿಗೆ ತೆರಳಿದರು.
ಕುಂದಾಪುರ ತಾಲೂಕಿನ 43 ಗ್ರಾಪಂಗಳ 200 ಕ್ಷೇತ್ರಗಳ 530 ಸ್ಥಾನಗಳಿಗೆ ಒಟ್ಟು 266 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ 18 ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳು, 70 ಸೂಕ್ಷ್ಮ ಹಾಗೂ 178 ಸಾಮಾನ್ಯ ಮತ ಗಟ್ಟೆಗಳನ್ನು ಗುರುತಿಸಲಾಗಿದೆ. ಈಗಾಗಲೇ 24 ಅಭ್ಯರ್ಥಿಗಳು ಅವಿರೋಧ ವಾಗಿ ಆಯ್ಕೆಯಾಗಿದ್ದು, ಒಟ್ಟು 1,262 ಮಂದಿ ಅಭ್ಯಥಿಗರ್ಳು ಕಣದಲ್ಲಿ ಉಳಿದುಕೊಂಡಿದ್ದಾರೆ.
ಒಟ್ಟು 1,86,685(90,339 ಪುರುಷರು, 96,343 ಮಹಿಳೆಯರು, 3 ಇತರರು) ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ. 266 ಮತಗಟ್ಟೆ ಗಳಿಗೆ ತಲಾ 4ರಂತೆ ಒಟ್ಟು 1,064 ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 1,150 ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆಂದು ತಹಶೀಲ್ದಾರ್ ಆನಂದಪ್ಪ ತಿಳಿಸಿದ್ದಾರೆ.
ಕಾರ್ಕಳ ತಾಲೂಕಿನ 27 ಗ್ರಾಪಂಗಳ 145 ಕ್ಷೇತ್ರಗಳ 399 ಸ್ಥಾನಗಳಿಗೆ ಒಟ್ಟು 187 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲಿ ನಕ್ಸಲ್ ಬಾಧಿತ ಪ್ರದೇಶದಲ್ಲಿ 24 ಮತಗಟ್ಟೆಗಳಿವೆ. ಈಗಾಗಲೇ 31 ಮಂದಿ ಅಭ್ಯರ್ಥಿ ಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 796 ಮಂದಿ ಕಣದಲ್ಲಿದ್ದಾರೆ. ಒಟ್ಟು 128357(61256 ಪುರುಷರು, 67101 ಮಹಿಳೆಯರು) ಮಂದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಪ್ರತಿ ಮತಗಟ್ಟೆಗೆ ನಾಲ್ವರು ಸಿಬ್ಬಂದಿಗಳು ಮತ್ತು ಒಬ್ಬರು ಡಿ ಗ್ರೂಪ್ ನೌಕರರಂತೆ ಒಟ್ಟು 939 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಕಾಪು ತಾಲೂಕಿನ 16 ಗ್ರಾಪಂಗಳ 99 ಕ್ಷೇತ್ರಗಳ 280 ಸ್ಥಾನಗಳಿಗೆ ಒಟ್ಟು 140 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ 10 ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 650 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಇಲ್ಲಿ ಒಟ್ಟು 95767 ಮಂದಿ ಮತದಾರರು ಮತ ಚಲಾಯಿಸ ಲಿದ್ದಾರೆ. ಒಟ್ಟು 624 ಸಿಬ್ಬಂದಿಗಳನ್ನು ಮತಗಟ್ಟೆಗಳಲ್ಲಿ ನಿಯೋಜಿಸಲಾಗಿದೆ ಎಂದು ಹಶೀಲ್ದಾರ್ ರಶ್ಮಿ ಮಾಹಿತಿ ನೀಡಿದರು.
ಅಧಿಕಾರಿಗಳಿಗೆ ಡಿಸಿ ತೀವ್ರ ತರಾಟೆ
ಕುಂದಾಪುರ ಹಾಗೂ ಕಾರ್ಕಳ ತಾಲೂಕುಗಳ ಮಸ್ಟರಿಂಗ್ ಕೇಂದ್ರಗಳಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಚುನಾವಣಾ ವೀಕ್ಷಕ ಜಿ.ಟಿ. ದಿನೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಕಳ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಭೇಟಿ ನೀಡಿದರು.
ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿ ಕಾರಿ ಭೇಟಿ ನೀಡಿದ ಸಂದರ್ಭ, ಸಭಾಂಗಣದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಕೆಲ ಅಧಿಕಾರಿಗಳು ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಯ್ದು ಕೊಳ್ಳದೇ ಗುಂಪು ಗುಂಪಾಗಿ ಸೇರಿ ಕೋವಿಡ್-19 ನಿಯಮಾವಳಿಗಳನ್ನು ಉಲ್ಲಂಘಿಸಿರುವುದನ್ನು ಕಂಡು ತೀವ್ರ ತರಾಟೆಗೆ ತೆಗೆದು ಕೊಂಡರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ, ಕೋವಿಡ್-19 ಮಾರ್ಗಸೂಚಿಯನ್ನು ಕಟ್ಟುನಿಟ್ಟಿನ ಪಾಲನೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಒಟ್ಟು 600 ಪೊಲೀಸ್ ಅಧಿಕಾರಿ ಗಳು ಮತ್ತು ಪೊಲೀಸ್ ಸಿಬ್ಬಂದಿ, ಮೂರು ಕೆಎಸ್‌ಆರ್‌ಪಿ, ಏಳು ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನು ನಿಯೋಜಿಸಲಾಗಿದೆ.
ಕುಂದಾಪುರ ತಾಲೂಕಿನಲ್ಲಿ ಓರ್ವ ಡಿವೈಎಸ್ಪಿ, ನಾಲ್ವರು ಪೊಲೀಸ್ ನಿರೀಕ್ಷ ಕರು, 12 ಮಂದಿ ಉಪನಿರೀಕ್ಷಕರು, ಸಹಾಯಕ ಉಪನಿರೀಕ್ಷಕರು, ಮತಗಟ್ಟೆ ಗಳಿಗೆ 430 ಮಂದಿ ಸಿಬಂದಿ, 1 ಕೆಎಸ್‌ಆರ್‌ಪಿ ತುಕಡಿ, ಒಂದು ಜಿಲ್ಲಾ ಮೀಸಲು ಪಡೆ, 3 ಸಶಸ್ತ್ರ ಮೀಸಲು ಪೊಲೀಸರನ್ನು ನಿಯೋಜಿಸಲಾಗಿದೆ.
ಕಾಪು ತಾಲೂಕಿನಲ್ಲಿ 1 ಡಿವೈಎಸ್ಪಿ, 2 ಇನ್ಸ್‌ಪೆಕ್ಟರ್, 5 ಸಬ್ ಇನ್ಸ್‌ಪೆಕ್ಟರ್, 19 ಎಎಸ್‌ಐ ಸೇರಿದಂತೆ 175 ಪೊಲೀಸ್ ಸಿಬಂದಿಗಳು, 25 ಹೋಂ ಗಾರ್ಡ್‌ಗಳು ಹಾಗೂ 1 ಡಿಎಆರ್, 1 ಕೆಎಸ್‌ಆರ್‌ಪಿ ತುಕಡಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿರುವ ಮತಗಟ್ಟೆಗಳಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಜೊತೆ, ಒಬ್ಬ ಸಶಸ್ತ್ರ ಮೀಸಲು ಪೊಲೀಸ್ ಸಿಬ್ಬಂದಿಯನ್ನು ಕೂಡ ನಿಯೋಜಿಸಲಾಗುತ್ತಿದೆ ಎಂದು ಎಸ್ಪಿ ವಿಷ್ಣುವರ್ಧನ್ ಮಾಹಿತಿ ನೀಡಿದರು.
