ಸಾಮಾನ್ಯ ಜ್ಞಾನ ಇಲ್ಲದ ಪ್ರಧಾನಿ ಮೋದಿ: ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪ

ಹೊಸದಿಲ್ಲಿ, ಡಿ. 26: ಕೃಷಿ ಕಾಯ್ದೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಸತತ ಸುಳ್ಳುಗಳಿಂದ ಜನರನ್ನು ಹಾದಿ ತಪ್ಪಿಸುವುದು ಪ್ರಧಾನಿ ಮೋದಿಯವರಿಗೆ ರೂಢಿಯಾಗಿದೆ. ಇವರಿಗೆ ಕನಿಷ್ಠ ಸಾಮಾನ್ಯ ಜ್ಞಾನವೂ (ಕಾಮನ್‍ಸೆನ್ಸ್) ಇಲ್ಲ ಎನ್ನುವುದು ಇವರು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಸಾಬೀತಾಗಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ಇಲ್ಲಿನ ಕರ್ನಾಟಕ ಸಂಘದ ಆವರಣದಲ್ಲಿ ರೈತ ಹೋರಾಟಕ್ಕೆ ಬೆಂಬಲ ಸೂಚಿಸಲು ಆಗಮಿಸಿದ ನಿಯೋಗವು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನ ಸೋಂಕು ಎಂದು ಮನೆಯಲ್ಲಿ ಕೂಡಿ ಹಾಕಿ ರೈತರ ಕತ್ತು ಹಿಸುಕುವ ಮೂರು ಕಾನೂನನ್ನು ಜಾರಿಗೆ ತಂದು ಪ್ರಜಾಪ್ರಭುತ್ವಕ್ಕೆ ಅವಮಾನಿಸಿ ಕೆಲವರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವುದು ನಿಚ್ಚಳವಾಗಿದೆ ಎಂದು ದೂರಿದರು.
ರೈತರ ಹೋರಾಟದ ನೈತಿಕ ಶಕ್ತಿಯನ್ನು ಎದುರಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇರುವುದೇ ಆದರೆ ರೈತ ಸಂಘದ ಹತ್ತು ಜನ ಸಾಮಾನ್ಯ ಕಾರ್ಯಕರ್ತರನ್ನು ಮಾತುಕತೆಗೆ ಕಳುಹಿಸುತ್ತೇವೆ. ತಾಕತ್ತು ಇದ್ದರೆ ಪ್ರಧಾನಿ ಮೋದಿಯವರು ಮುಖಾಮುಖಿಯಾಗಲಿ ಎಂದು ಬಡಗಲಪುರ ನಾಗೇಂದ್ರ ಇದೇ ವೇಳೆ ಸವಾಲು ಹಾಕಿದರು.
ಕೃಷಿ ವಿಜ್ಞಾನಿ ಪ್ರಕಾಶ್ ಕಮ್ಮರಡಿ ಮಾತನಾಡಿ, ಹಾಲಿ ಇರುವ ಸರಕಾರ ರೈತ ವಿರೋಧಿಯಲ್ಲ, ರೈತ ದ್ರೋಹಿ ಸರಕಾರ. ಅನ್ನ, ಹಾಲು ಮುಂತಾದವುಗಳನ್ನು ಕೊಟ್ಟು ನಮ್ಮನ್ನು ಸಾಕಿ ಸಲುಹಿದ ರೈತ ಕೇಳದೆ ಇರುವಂತ ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಈ ಕಾನೂನು ತಿದ್ದುಪಡಿಯಿಂದ ಕೇವಲ ರೈತರಿಗೆ ಅನ್ಯಾಯ ಆಗುವುದಿಲ್ಲ, ದಲಿತ, ಕಾರ್ಮಿಕ ಹಾಗೂ ಗ್ರಾಹಕರಿಗೂ ಘೋರ ಅನ್ಯಾಯವಾಗಲಿದೆ ಎಂದು ಎಚ್ಚರಿಸಿದರು.
ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಮಾತನಾಡಿ, ದಕ್ಷಿಣ ಭಾರತದ ರೈತರಿಗೆ ಈಗ ಸುಗ್ಗಿಯ ಕಾಲ. ಹೀಗಾಗಿ ಈ ಕಾಯ್ದೆಯ ವಿರುದ್ದದ ಹೋರಾಟ ಬಿರುಸುಗೊಂಡಿಲ್ಲ. ಸುಗ್ಗಿ ಮುಗಿದ ನಂತರ ಮಾಡುವ ಸುಗ್ಗಿ ಹಬ್ಬವನ್ನು ಹೋರಾಟದ ದಿನವನ್ನಾಗಿ ಆಚರಿಸಲಾಗುವುದು ಹಾಗೂ ಜನವರಿ 26 ದೇಶದ ರೈತರು ದಲಿತರು ಕಾರ್ಮಿಕರು ಹೊಸದಿಲ್ಲಿ ಮುತ್ತಿಗೆ ಹಾಕುವ ಸಂದರ್ಭ ಬರಲಿದೆ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಹೋರಾಟಕ್ಕೆ ಬೆಂಬಲ: ಪತ್ರಿಕಾಗೋಷ್ಠಿಯ ನಂತರ ನಿಯೋಗವು ಹರಿಯಾಣ ರಾಜಾಸ್ಥಾನ ದಿಲ್ಲಿ ಗಡಿಯಾಗಿರುವ ಷಹಜಾನ್‍ಪುರದಲ್ಲಿ ನಡೆಯುತ್ತಿರುವ ಒಂದು ರೈತ ಹೋರಾಟದ ಸ್ಥಳಕ್ಕೆ ಭೇಟಿಯಿತ್ತು, ಅಲ್ಲಿನ ಮುಖಂಡರೊಂದಿಗೆ ಚರ್ಚೆ ನಡೆಸಿತು. ನಾಳೆ ನಿಯೋಗವು ದಿಲ್ಲಿ ಸಮೀಪದ ಟಿಕ್ರಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಹೊರಾಟದಲ್ಲಿ ಭಾಗಿಯಾಗಲಿದೆ ಎಂದು ತಿಳಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ಗುರುಪ್ರಸಾದ್ ಕೆರೆಗೋಡು, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್, ಕಾಳಪ್ಪ, ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ಮಾಜಿ ಶಾಸಕ ಬಿ.ಆರ್.ಪಾಟೀಲ್, ಅಪರ್ಣ, ನಾಗಮ್ಮ ಮತ್ತಿತರರು ಹಾಜರಿದ್ದರು.







