ಸಂಸದ ನಳಿನ್ ಎತ್ತಿನಹೊಳೆ ಯೋಜನೆಯನ್ನು ಬೆಂಬಲಿಸಿ ಭಾಷಣ ಮಾಡುತ್ತಿದ್ದಾರೆ: ರಮಾನಾಥ ರೈ

ಬಂಟ್ವಾಳ, ಡಿ.26: ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದು ಪ್ರತಿಭಟನೆ ನಡೆಸಿರುವ ಸಂಸದ ನಳಿನ್ ಕುಮಾರ್ ಕಟೀಲು ಇಂದು ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಳಿಕ ಬಯಲುಸೀಮೆಯ ಜಿಲ್ಲೆಗಳಿಗೆ ಹೋಗಿ ಎತ್ತಿನಹೊಳೆ ಯೋಜನೆಯನ್ನು ಜಾರಿ ಮಾಡಿದವರು ನಾವೇ ಎಂದು ಭಾಷಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಬಿ.ಸಿ.ರೋಡ್ ಸ್ಪರ್ಶಕಲಾ ಮಂದಿರದಲ್ಲಿ ಶನಿವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಪಂ ಚುನಾವಣೆಗೆ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಜೀವ ಬೆದರಿಕೆ ಹಾಕಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಬಿಜೆಪಿಯವರು ಬೆದರಿಸಿದ್ದಾರೆ. ಅಲ್ಲದೆ ಮಾನಪತ್ರ ಸಲ್ಲಿಸಿದ ಬಳಿಕವೂ ಅರ್ಧ ರಾತ್ರಿಯಲ್ಲಿ ಕರೆ ಮಾಡಿ ಬೆದರಿಸಿರುವುದಲ್ಲದೆ ಹೊರ ಊರಿನ ಜನರು ಬಂದು ಬೆದರಿಕೆ ಹಾಕಿರುವ ಹಲವು ಪ್ರಸಂಗಗಳು ನಡೆದಿವೆ. ಆದರೆ ಯಾರ ಬೆದರಿಕೆಗೂ ಜಗ್ಗದೆ ನಮ್ಮ ಕಾರ್ಯಕರ್ತರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದರು.
ನನ್ನ ಅಧಿಕಾರದ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಿದ್ದೇನೆ. ಒಂದು ಕ್ಷೇತ್ರದಲ್ಲಿ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ಆಗಿರುವುದು ಬಂಟ್ವಾಳದಲ್ಲಿ ಮಾತ್ರ. ಹಾಗೆಯೇ ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಹಕ್ಕು ಪತ್ರ ವಿತರಣೆ ಮಾಡಿರುವುದು ಕೂಡಾ ಬಂಟ್ವಾಳ ಕ್ಷೇತ್ರದಲ್ಲಿ ಆಗಿದೆ ಎಂದು ಅವರು ಹೇಳಿದರು.
ಜಿಪಂ ಸದಸ್ಯ ಪದ್ಮಶೇಖರ್ ಜೈನ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ. ಶೆಟ್ಟಿ, ಬಂಟ್ವಾಳ ಪುರಸಭಾ ಅಧ್ಯಕ್ಷ ಮುಹಮ್ಮದ್ ಶರೀಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಯುವ ಕಾಂಗ್ರೆಸ್ ದ.ಕ. ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ನವಾಝ್ ಬಡಕಬೈಲ್, ಬಂಟ್ವಾಳ ಅಧ್ಯಕ್ಷ ಪ್ರಶಾಂತ್ ಕುಲಾಲ್, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ, ಪುರಸಭಾ ಸದಸ್ಯ ಜನಾರ್ಧನ ಚೆಂಡ್ತಿಮಾರ್, ಪ್ರಮುಖರಾದ ಸುದರ್ಶನ್ ಜೈನ್, ಅಮ್ಮು ರೈ ಹರ್ಕಾಡಿ, ಮಾಯಿಲಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.
ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಎಂ.ಎಸ್.ಮುಹಮ್ಮದ್ ಧನ್ಯವಾದಗೈದರು. ಪಕ್ಷದ ಪ್ರಮುಖರಾದ ಜಗದೀಶ್ ಕೊಯ್ಲ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಶಕಲಾ ಮಂದಿರದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮ ಪಂಚಾಯತ್ ಗಳ ಮಾಜಿ ಅಧ್ಯಕ್ಷರ ಸಹಿತ ಹಲವು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಅವರನ್ನು ಮಾಜಿ ಸಚಿವ ಬಿ.ರಮಾನಾಥ ರೈ ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.






.jpeg)


.jpeg)
.jpeg)

