ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ

ಬೆಂಗಳೂರು, ಡಿ. 26: ಡಿನೋಟಿಫಿಕೇಶನ್ ಪ್ರಕರಣದಲ್ಲಿ ಹೈಕೋರ್ಟ್ ಆದೇಶಕ್ಕೆ ತಲೆಬಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪ್ರಚಾರ ಸಮಿತಿ ಕಾರ್ಯಕರ್ತರು ಇಲ್ಲಿನ ಆನಂದ ರಾವ್ ವೃತ್ತದಲ್ಲಿನ ಕಾಂಗ್ರೆಸ್ ಕಚೇರಿ ಬಳಿ ಧರಣಿ ಸತ್ಯಾಗ್ರಹ ನಡೆಸಿದರು.
ಶನಿವಾರ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಮಾತನಾಡಿ, ಬೆಳ್ಳಂದೂರು ಐ.ಟಿ ಕಾರಿಡಾರ್ ಕೆಐಎಡಿಬಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಯಡಿಯೂರಪ್ಪ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಹೈಕೋರ್ಟ್ ಆದೇಶಕ್ಕೆ ತಲೆಬಾಗಿ ರಾಜಿನಾಮೆ ನೀಡಬೇಕು. ಆದರೆ, ಬಿಜೆಪಿ ಅವರನ್ನೆ ಆ ಸ್ಥಾನದಲ್ಲಿ ಮುಂದುವರಿಸಿರುವುದನ್ನು ನೋಡಿದರೆ ಭ್ರಷ್ಟರು ಬಿಜೆಪಿಗೆ ಅನಿವಾರ್ಯ ಎಂಬಂತಾಗಿದೆ ಎಂದು ಟೀಕಿಸಿದರು.
ಭ್ರಷ್ಟರ ವಿರುದ್ಧ ಎಂದು ಹೇಳುವ ಪ್ರಧಾನಿ ಮೋದಿ ಇನ್ನೂ ಏಕೆ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿಲ್ಲ ಎಂದು ಪ್ರಶ್ನಿಸಿದ ಅವರು, ಕೇವಲ ಚುನಾವಣೆ ಪ್ರಚಾರಕ್ಕಾಗಿ ಮಾತ್ರ `ನಾನು ತಿನ್ನಲ್ಲ ತಿನ್ನಲು ಬಿಡುವುದಿಲ್ಲ' ಎಂದು ಹೇಳುತ್ತಲೇ ತಾನೂ ತಿಂದು ತನ್ನ ಪಕ್ಷದ ಮುಖ್ಯಮಂತ್ರಿಯನ್ನು ತಿನ್ನಲು ಬಿಟ್ಟಿರುವ ಉದಾಹರಣೆ ಮತ್ತೊಂದಿಲ್ಲ ಎಂದು ಲೇವಡಿ ಮಾಡಿದರು.
ಭ್ರಷ್ಟಾಚಾರ ವಿರುದ್ಧ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ಈ ಪ್ರಕರಣದಲ್ಲಿ ಕೋರ್ಟ್ ತೀರ್ಪು ಅತ್ಯಂತ ಮಹತ್ವವಾಗಿದ್ದು. ತನಿಖೆ ನಡೆಸಲು ನ್ಯಾಯಾಲಯದ ಅಧೀನದಲ್ಲಿ ನಡೆಯಬೇಕೆಂದು ನೀಡಿರುವ ಸೂಚನೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನೀಡಿರುವ ನಿರ್ದೇಶನ ಎಂಬುದನ್ನು ಅರಿತುಕೊಳ್ಳಬೇಕು. ಅಲ್ಲದೆ, ಸಿಎಂ ಬಿಎಸ್‍ವೈ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.
ಪಕ್ಷದ ಮುಖಂಡರಾದ ಜಿ.ಜನಾರ್ದನ್, ಎ.ಆನಂದ್, ಎಂ.ಎ.ಸಲೀಂ. ಈ.ಶೇಖರ್, ಜಯಸಿಂಹ, ಶಶಿಭೂಷಣ, ಚಂದ್ರಶೇಖರ್, ಶೀಲಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಪಾಲ್ಗೊಂಡಿದ್ದರು.







