ಚಿಕ್ಕಮಗಳೂರು: ರವಿವಾರದಿಂದ ದತ್ತಜಯಂತಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆಯುವ ದತ್ತ ಜಯಂತಿ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ದೊರೆಯಲಿದ್ದು, ಅನುಸೂಯೆ ಪೂಜೆ, ಸಂಕೀರ್ತನಾ ಯಾತ್ರೆಯೊಂದಿಗೆ ದತ್ತಜಯಂತಿ ಆರಂಭಗೊಳ್ಳಲಿದೆ.
ರವಿವಾರ ಬೆಳಿಗ್ಗೆ 9:30ಕ್ಕೆ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಕಾಮಧೇನು ಗಣಪತಿ ದೇವಸ್ಥಾನದವರೆಗೂ ಮಹಿಳೆಯರು ಸಂಕೀರ್ತಾನ ಯಾತ್ರೆ ನಡೆಸಲಿದ್ದಾರೆ.
ಡಿ.28ರಂದು ಮಧ್ಯಾಹ್ನ 2ಕ್ಕೆ ನಗರದ ರತ್ನಗಿರಿ ರಸ್ತೆಯ ಕಾಮಧೇನು ಗಣಪತಿ ದೇವಸ್ಥಾನದಿಂದ ಆಜಾದ್ ಪಾರ್ಕ್ ವೃತ್ತದ ವರೆಗೂ ಸಂಕೀರ್ತಾನ ಯಾತ್ರೆ ನಡೆಯಲಿದೆ. ನಂತರ ಆಜಾದ್ ಪಾರ್ಕ್ ವೃತ್ತದಲ್ಲಿ ಮಹಾ ಆರತಿ ಕಾರ್ಯ ನಡೆಯಲಿದೆ. ಡಿ.29ರಂದು ದತ್ತಭಕ್ತರು ದತ್ತಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದುಕೊಂಡು ಗಣಪತಿ ಹೋಮ, ದತ್ತಹೋಮ ಮತ್ತು ಧನ್ವಂತರಿ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ದತ್ತ ಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರವನ್ನು ಕೇಸರಿ ಬಾವುಟ, ತಳಿರು ತೋರಣಗಳಿಂದ ಅಲಂಕೃತಗೊಳಿಸಲಾಗಿದೆ. ನಗರದ ವೃತ್ತಗಳಾದ ಹನುಮಂತಪ್ಪ ವೃತ್ತ, ಆಜಾದ್ ಪಾರ್ಕ್ ವೃತ್ತ, ವಿಜಯಪುರ ರಸ್ತೆಗಳೂದ್ದಕ್ಕೂ ಕೇಸರಿ ಬಾವುಟ ಹಾಗೂ ಹಾರಗಳಿಂದ ಅಲಂಕೃತಗೊಳಿಸಲಾಗಿದೆ.
ದತ್ತ ಜಯಂತಿಗೆ ಜಿಲ್ಲೆ ಹಾಗೂ ರಾಜ್ಯದಿಂದ ದತ್ತಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ದತ್ತಪೀಠದಲ್ಲೂ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆ ದುರಸ್ಥಿ ಕಾರ್ಯ ನಡೆಸಲಾಗಿದೆ. ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಕೊರೋನ ಹಿನ್ನೆಲೆಯಲ್ಲಿ ಭಕ್ತರು ದೈಹಿಕ ಅಂತರ ಕಾಪಾಡಿಕೊಂಡು ದತ್ತಪಾದುಕೆ ದರ್ಶನ ಪಡೆದುಕೊಳ್ಳಲು ಮತ್ತು ಗುಂಪು ಸೇರದಂತೆ ತಡೆಯಲು ಬ್ಯಾರಿಕೇಡ್ ಹಾಕಲಾಗಿದೆ.
ದತ್ತ ಜಯಂತಿ ಪ್ರಯುಕ್ತ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ದತ್ತಪೀಠಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕೊರೋನ ಸೋಂಕು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದತ್ತಪಾದುಕೆ ದರ್ಶನಕ್ಕೆ ತೆರಳುವ ಮಾರ್ಗದಲ್ಲಿ ಎರಡು ಸ್ಯಾನಿಟೈಸ್ ಸ್ಟ್ಯಾಂಡ್‍ಗಳನ್ನು ಅಳವಡಿಸಲಾಗಿದೆ. ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯ ಸಂದರ್ಭಕ್ಕಾಗಿ ಅಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
.jpg)







