ಆದಿತ್ಯನಾಥ್ ವಿರುದ್ಧ ಟ್ವೀಟ್ ಮಾಡಿದ ಆರೋಪ: ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ವಿಶೇಷ ಲಕ್ಷಣ ಎಂದ ಕೋರ್ಟ್

ಲಕ್ನೋ,ಡಿ.26: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಟ್ವೀಟಿಸಿದ್ದಕ್ಕಾಗಿ ಯಶವಂತ ಸಿಂಗ್ ಎಂಬವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ನ್ನು ರದ್ದುಗೊಳಿಸಿರುವ ಅಲಹಾಬಾದ್ ಉಚ್ಚ ನ್ಯಾಯಾಲಯವು, ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿದೆ ಎಂದು ಹೇಳಿದೆ.
‘ಆದಿತ್ಯನಾಥ್ ಉತ್ತರ ಪ್ರದೇಶವನ್ನು ‘ಜಂಗಲ್ ರಾಜ್’ ಆಗಿ ಪರಿವರ್ತಿಸಿದ್ದಾರೆ ಮತ್ತು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತಿತ್ವದಲ್ಲಿಲ್ಲ ’ಎಂದು ಸಿಂಗ್ ಟ್ವೀಟಿಸಿದ್ದರು. ಇದಕ್ಕಾಗಿ ರಾಜ್ಯ ಸರಕಾರವು ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ಕಲಂ 66-ಡಿ ಮತ್ತು ಐಪಿಸಿಯ ಕಲಂ 500ರ ಅಡಿ ಪ್ರಕರಣವನ್ನು ದಾಖಲಿಸಿತ್ತು.
ತನ್ನ ವಿರುದ್ಧದ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಕೋರಿ ಸಿಂಗ್ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ ನಕ್ವಿ ಮತ್ತು ವಿವೇಕ ಅಗರವಾಲ್ ಅವರ ಪೀಠವು,ರಾಜ್ಯದಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಬಗ್ಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮಂತಹ ಸಾಂವಿಧಾನಿಕ ಉದಾರವಾದಿ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿದ್ದು,ಈ ಹಕ್ಕು ಸಂವಿಧಾನದ ವಿಧಿ 19ರಡಿ ರಕ್ಷಣೆಯನ್ನು ಹೊಂದಿದೆ ಎಂದು ಹೇಳಿತು. ರಾಜ್ಯ ಸರಕಾರದ ಕಾರ್ಯ ವೈಖರಿಯ ವಿರುದ್ಧ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವುದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಕಲಮ್‌ಗಳಡಿ ಅಪರಾಧವಾಗುವುದಿಲ್ಲ ಎಂದು ಅದು ಎತ್ತಿ ಹಿಡಿಯಿತು.
ಆದಿತ್ಯನಾಥ ಸರಕಾರವು ತನ್ನ ವಿರುದ್ಧ,ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ವಿರುದ್ಧ ಅಸಹಿಷ್ಣುತೆಯನ್ನು ಹಿಂದೆಯೂ ಪ್ರದರ್ಶಿಸಿತ್ತು. ಈ ವರ್ಷದ ಮಾರ್ಚ್‌ನಲ್ಲಿ ಆದಿತ್ಯನಾಥರನ್ನು ‘ಭಯೋತ್ಪಾದಕ ’ಎಂದು ಬಣ್ಣಿಸಿದ್ದ ವೀಡಿಯೊವೊಂದನ್ನು ಮರು ಟ್ವೀಟಿಸಿದ್ದಕ್ಕಾಗಿ ಕಾನ್ ಪುರದ ವಕೀಲ ಅಬ್ದುಲ್ ಹನ್ನಾನ್ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು. ಎಪ್ರಿಲ್‌ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆದಿತ್ಯನಾಥ ವಿರುದ್ಧ ‘ಆಕ್ಷೇಪಾರ್ಹ ಹೇಳಿಕೆ ’ಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪತ್ರಕರ್ತ ಪ್ರಶಾಂತ ಕನೋಜಿಯಾರನ್ನು ಲಕ್ನೋ ಪೊಲೀಸರು ಬಂಧಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಾಗಿ ಇದು ಅವರ ಎರಡನೇ ಬಂಧನವಾಗಿತ್ತು. ಹಲವಾರು ತಿಂಗಳುಗಳ ಬಳಿಕ ಅವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.







