ಮತಾಂತರ ನಿಷೇಧ ಕಾಯ್ದೆಯನ್ನು ಸ್ವೇಚ್ಛೆಯಿಂದ ಬಳಸಿಕೊಳ್ಳುತ್ತಿರುವ ಹಿಂದುತ್ವ ಗುಂಪುಗಳು: ವರದಿ
ಹಲವು ಯುವಕರು ‘ಲವ್ ಜಿಹಾದ್’ ಹೆಸರಿನಲ್ಲಿ ಜೈಲುಪಾಲು

ಹರ್ದೋಯಿ,ಡಿ.26: ಉತ್ತರ ಪ್ರದೇಶದಲ್ಲಿ ಜಾರಿಗೆ ಬಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಸಂಘಪರಿವಾರ ಗುಂಪುಗಳು ಸ್ವೇಚ್ಛೆಯಿಂದ ಬಳಸುತ್ತಿದ್ದು, ಪೊಲೀಸರು ಸ್ಥಳಕ್ಕೆ ತಲುಪುವ ಮುಂಚೆಯೇ ಈ ಗುಂಪುಗಳು ತಮ್ಮ ಪ್ರಾಬಲ್ಯವನ್ನು ಮೆರೆಯಲು ಪ್ರಾರಂಭಿಸಿದೆ ಎಂದು theprint.in ವರದಿ ಮಾಡಿದೆ.
ಘಟನೆ-1
ಅವರಿಬ್ಬರೂ 50ಮೀಟರ್ ಗಳ ಅಂತರದಲ್ಲಿ ವಾಸಿಸುತ್ತಿದ್ದರು. 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮೆನಯ ಹೊರಗಡೆಯೂ ಭೇಟಿಯಾಗುತ್ತಿದ್ದರು. ಮದುವೆಯಾಗುವ ಯೋಜನೆಯನ್ನೂ ಹಾಕಿಕೊಂಡಿದ್ದರು. ನ.30ರಂದು 18 ವರ್ಷದ ಹಿಂದೂ ಯುವತಿ ಮತ್ತು 25 ವರ್ಷದ ಮುಸ್ಲಿಮ್ ಯುವಕ ಮದುವೆಯಾಗಬೇಕೆಂದು ಹರ್ದೋಯಿಯ ಸ್ಥಳೀಯ ನ್ಯಾಯಾಲಯಕ್ಕೆ ಆಗಮಿಸಿದ್ದರು. ಯುವತಿ ಅಲ್ಲಿರುವುದನ್ನು ‘ತಿಳಿದ’ ಯುವತಿಯ ತಂದೆ ಆಕೆಯನ್ನು ಬಲವಂತವಾಗಿ ಕರೆದೊಯ್ದರು,
ಕೆಲವು ದಿನಗಳು ಕಳೆದು ಡಿ.10ರಂದು ಯುವತಿಯು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾಳೆ. ಆಕೆಯನ್ನು ಪ್ರೀತಿಸುತ್ತಿದ್ದ ಮುಹಮ್ಮದ್ ಆಝಾದ್ ಎಂಬಾತ ಆಕೆ ತನ್ನ ಧರ್ಮ ಬದಲಾಯಿಸಲಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯದ ಆವರಣದಲ್ಲಿ ಬಿಟ್ಟು ಹೋಗಿದ್ದಾನೆ. ಆತ ನನ್ನ ಮೇಳೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ. ನನ್ನ ಖಾಸಗಿ ಫೋಟೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪ್ರಕರಣ ದಾಖಲಿಸುತ್ತಾಳೆ. ಡಿ.11ರಂದು ಆಝಾದ್ ನನ್ನು ‘ಲವ್ ಜಿಹಾದ್’ ಕಾಯ್ದೆಯಡಿ ಕ್ರಿಮಿನಲ್ ಹಾಗೂ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗುತ್ತದೆ.
ಈ ಕುರಿತು ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ, “ಅವರಿಬ್ಬರೂ ಪ್ರೀತಿಸುತ್ತಿದ್ದರು ಎಂಬುವುದು ನಮಗೆ ತಿಳಿದಿದೆ. ಆತ ಮುಸ್ಲಿಂ ಎಂಬುವುದೂ ಆಕೆಗೆ ಗೊತ್ತು. ಆದರೆ ಆತ ಬಲವಂತದ ಮತಾಂತರ ಮಾಡಲು ಪ್ರಯತ್ನಿಸಿದ್ದಾನೆ ಎಂಬ ಪ್ರಕರಣ ದಾಖಲಿಸಲಾಗಿದೆ. ಅದು ಸತ್ಯವೋ ಅಲ್ಲವೋ ಎಂದು ನ್ಯಾಯಾಲಯ ತೀರ್ಮಾನಿಸಲಿದೆ. ಇಲ್ಲಿ ಯುವತಿಯ ಹೇಳಿಕೆ ಮುಖ್ಯವಾಗಿರುತ್ತದೆ ಎಂದು ಹೇಳಿದ್ದಾರೆ.
ಈ ನಡುವೆ ಪೊಲೀಸರು ಇನ್ನೊಂದು ವಿಚಾರದ ಕುರಿತು ಗಮನ ಸೆಳೆದರು. “ಬಲವಂತದ ಮತಾಂತರ ನಿಷೇಧ ಕಾಯ್ದೆಯು ಜಾರಿಗೆ ಬಂದ ಬಳಿಕ ಇಲ್ಲಿ ಹಿಂದುತ್ವ ಗುಂಪುಗಳು ಸಕ್ರಿಯವಾಗಿದೆ” ಹರ್ದೋಯಿಯ ಈ ಪ್ರಕರಣದಲ್ಲಿ ಸ್ಥಳೀಯ ಬಜರಂಗದಳ ಮುಖಂಡನ ಉಪಸ್ಥಿತಿಯಲ್ಲೇ ಪ್ರಕರಣ ದಾಖಲಿಸಲಾಗಿದೆ. ಇಂತಹಾ ಪ್ರಕರಣಗಳನ್ನು ಪತ್ತೆ ಹಚ್ಚಲೆಂದೇ ನಮ್ಮಲ್ಲಿನೆಟ್ ವರ್ಕ್ ಇದೆ’ ಎಂದು ಬಜರಂಗದಳ ಜಿಲ್ಲಾ ಮುಖ್ಯಸ್ಥ ಪವನ ರಸ್ತೋಗಿ ಹೇಳಿದ್ದಾಗಿ theprint.in ವರದಿ ಮಾಡಿದೆ.
“ನಮಗೆ ತುಂಬಾ ಬಲಿಷ್ಟ ನೆಟ್ ವರ್ಕ್ ಇದೆ. ಈ ಮೂಲಕ ನಾವು ಇಂತಹಾ ಪ್ರಕರಣಗಳನ್ನು ಪತ್ತೆ ಹಚ್ಚುತ್ತೇವೆ. ಈ ಯುವತಿಯು ಆತನನ್ನು ಮದುವೆಯಾಗಲು ತಯಾರಾಗಿದ್ದಳು ಎಂಬ ಸುದ್ದಿ ತಿಳಿದ ಕೂಡಲೇ ಮೊದಲು ಆಕೆಯನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸುವ ವ್ಯವಸ್ಥೆ ಮಾಡಿದೆವು. ಇಂತಹಾ ಯಾವುದೇ ಪ್ರಕರಣಗಳಿದ್ದರೂ ನಾವು ಮಧ್ಯಪ್ರವೇಶಿಸುತ್ತೇವೆ. ತಂದೆಯ ಅನುಮತಿ ಇಲ್ಲದೇ ಒಬ್ಬ ಹೆಣ್ಣು ಕೂಡಾ ಮನೆಯಿಂದ ಹೊರಗೆ ಕಾಲಿಡಬಾರದು. ಕಾಲಿಟ್ಟರೆ ಕೂಡಲೇ ನಾವು ಅಲ್ಲಿ ಹಾಜರಿರುತ್ತೇವೆ. ಈಕೆ ಮುಸ್ಲಿಮನೊಂದಿಗೆ ಮದುವೆಯಾಗಲು ತಯಾರಾಗಿದ್ದಳು. ನಾವು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ. ನಮಗೆ ನಮ್ಮ ಧರ್ಮ ರಕ್ಷಣೆಯೇ ಮುಖ್ಯ. ನಾವು ಮುಸ್ಲಿಮರನ್ನು ‘ಜಿಹಾದ್’ ಮಾಡಲು ಬಿಡುವುದಿಲ್ಲ. ಈ ಕಾನೂನು ನಮ್ಮ ಸಂಘಟನೆಯನ್ನು ಇನ್ನೂ ಬಲಿಷ್ಠವಾಗಿಸಿದೆ” ಎಂದು ಬಜರಂಗದಳ ಮುಖಂಡ ಹೇಳಿಕೆ ನೀಡಿದ್ದು ವರದಿಯಾಗಿದೆ.
ಘಟನೆ-2
ಹರ್ದೋಯಿಯಿಂದ 62 ಕಿ.ಮೀ ದೂರವಿರುವ ಪ್ರದೇಶದಲ್ಲಿ 42 ವರ್ಷದ ಹಿಂದೂ ಮಹಿಳೆಯೋರ್ವರು 27 ವರ್ಷದ ಮುಹಮ್ಮದ್ ಸಯೀದ್ ಎಂಬಾತನ ವಿರುದ್ಧ ‘ಬೆದರಿಸಿ ಅತ್ಯಾಚಾರ ನಡೆಸಿ ಬಳಿಕ ಇಸ್ಲಾಂಗೆ ಮತಾಂತರ ಆಗುವಂತೆ ಬಲವಂತಪಡಿಸಿದ್ದಾನೆ” ಎಂದು ಪ್ರಕರಣ ದಾಖಲಿಸಿದ್ದಾರೆ. ಆತ 2017ರಲ್ಲಿ ನನ್ನ ಹೆಸರು ಸುನೀಲ್ ಎಂದು ಸುಳ್ಳು ಹೇಳಿದ್ದು ಬಳಿಕ ಈ ಮೂರು ವರ್ಷಗಳಲ್ಲಿ ಬಲವಂತಪಡಿಸಿ ಸಂಬಂಧವಿಟ್ಟುಕೊಳ್ಳುವಂತೆ ಮಾಡಿದ್ದಾನೆ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸಯೀದ್ ನ ಕುಟುಂಬದೊಂದಿಗೆ ಮಾತನಾಡಿದಾಗ, “ನಮಗೆ ಆಕೆಯ ಪರಿಚಯವಿತ್ತು. ಆಕೆ ಸಯೀದ್ ನನ್ನು ‘ಭಾಯ್’ ಎಂದು ಕರೆಯುತ್ತಿದ್ದಳು ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಸಯೀದ್ ನ ವಿರುದ್ದ ಬಲವಂತದ ಮತಾಂತರ, ಅತ್ಯಾಚಾರ, ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, “ನಾವು ಆರೋಪಿಯನ್ನು ಬಂಧಿಸಿದ್ದೇವೆ. ತನಿಖೆ ನಡೆಸುತ್ತಿದ್ದೇವೆ. ಇಂತಹಾ ಪ್ರಕರಣಗಳಲ್ಲಿ ಯುವತಿಯ ಹೇಳಿಕೆಯನ್ನು ಆಧರಿಸಿ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.
ಇಲ್ಲೂ ಕೂಡ ಮೇಲಿನ ಪ್ರಕರಣದಂತೆಯೇ ಯುವತಿಯೊಂದಿಗೆ ವಿಶ್ವ ಹಿಂದೂ ಪರಿಷತ್ ನ ಮುಖ್ಯಸ್ಥರು ಪ್ರಕರಣ ದಾಖಲಿಸುವಾಗ ಹಾಜರಿದ್ದರು. ವಿಹಿಂಪ ಶಹಜಹಾನ್ಪುರದ ಜಿಲ್ಲಾ ಮಂತ್ರಿ ರಾಜೇಶ್ ಅವಸ್ತಿಯನ್ನು ಮಾತನಾಡಿಸಿದಾಗ, “ನಾವು ಹಿಂದುತ್ವವನ್ನು ರಕ್ಷಣೆ ಮಾಡುತ್ತಿದ್ದೇವೆ. ನಮ್ಮ ಯುವತಿಯರು ಎಲ್ಲೂ ಜಾರಿಹೋಗಬಾರದು. ಈ ಪ್ರಕರಣದ ಕುರಿತು ನಾವು ಪೊಲೀಸರ ಬಳಿ ಹೋದಾಗ, ಅಲ್ಲಿನ ಅಧಿಕಾರಿ ಈ ಪ್ರಕರಣವನ್ನು ತನಿಖೆ ಮಾಡಲು ಓರ್ವ ಮುಸ್ಲಿಂ ಪೊಲೀಸ್ ಗೆ ಸೂಚಿಸಿದರು. ಆದರೆ ನಾವು ಬಿಡಲೇ ಇಲ್ಲ. ಅಲ್ಲಿ ಗದ್ದಲವೆಬ್ಬಿಸಿದೆವು. ಕೊನೆಗೆ ನಾವೇ ಹಿರಿಯ ಅಧಿಕಾರಿಗೆ ಕರೆ ಮಾಡಿ, ಇದರಲ್ಲಿ ತನಿಖೆ ನಡೆಸುವಂತದ್ದೇನೂ ಇಲ್ಲ. ಇದು ಲವ್ ಜಿಹಾದ್ ಪ್ರಕರಣ ಎಂಬುವುದು ಖಾತರಿಯಾಗಿದೆ ಎಂದು ಹೇಳಿದ ಬಳಿಕ ಕೂಡಲೇ ಪ್ರಕರಣ ದಾಖಲಿಸಿದರು ಎಂದು ಹೇಳಿಕೆ ನೀಡಿದ್ದಾರೆ.
“ಇಲ್ಲಿ ನಾವು ಮಹಿಳೆಯ ಇಚ್ಛೆಯನ್ನೇನೂ ನೋಡುವುದಿಲ್ಲ. ನಮಗದರ ಅಗತ್ಯವೂ ಇಲ್ಲ. ನಾವು ಹಿಂದುತ್ವವನ್ನಷ್ಟೇ ಪರಿಗಣಿಸುತ್ತೇವೆ. ಕಾತ್ರಾ ಎಂಬ ಪ್ರದೇಶದಲ್ಲಿ ಓರ್ವ ಯುವತಿಯು ಆಕೆಯ ಇಚ್ಚೆಯೊಂದಿಗೆ ಮುಸ್ಲಿಮನೊಂದಿಗೆ ತೆರಳಿದ್ದಳು. ನಾವು ಕೋರ್ಟ್ ಗೇಟ್ ನಿಂದಲೇ ಆಕೆಯನ್ನು ಎತ್ತಿಕೊಂಡು ಬಂದು ಎರಡು ವಾರಗಳ ಬಳಿಕ ಹಿಂದೂ ಯುವಕನೊಂದಿಗೆ ಮದುವೆ ಮಾಡಿಸಿದೆವು. ಈಗ ಅವಳು ಸುಖವಾಗಿದ್ದಾಳೆ”. ಇದು ನಮ್ಮ ಮುಖ್ಯ ಕೆಲಸ. ಮುಸ್ಲಿಮರು ನಮ್ಮ ಮಹಿಳೆಯರನ್ನು, ಮಕ್ಕಳನ್ನು ಸಹೋದರಿಯರನ್ನು ಮದುವೆಯಾಗಿ ಅವರನ್ನು ಮಕ್ಕಳು ಹೆರುವುದಕ್ಕೆಂದು ಬಳಸಿ ಆ ಮಕ್ಕಳನ್ನು ಭಯೋತ್ಪಾದಕರನ್ನಾಗಿ ಮಾಡುತ್ತಾರೆ ಎಂದೂ ವಿಹಿಂಪ ಮುಖಂಡ ಹೇಳಿಕೆ ನೀಡಿದ್ದಾನೆ.
ಇನ್ನು ಸಯೀದ್ ವಿರುದ್ಧ ಪ್ರಕರಣ ದಾಖಲಿಸಿದ್ದ 42ರ ಹರೆಯದ ಮಹಿಳೆಯು ಆತನ ವಿರುದ್ಧ ವಿವಿಧ ಆರೋಪಗಳನ್ನು ಮಾಡಿದ್ದಾರೆ. “ಒಂದು ಸಣ್ಣ ವಿಚಾರದಲ್ಲಿ ನಮಗೆ ಪರಿಚಯವಾಗಿತ್ತು. ಬಳಿಕ ನನ್ನನ್ನು ಪರಿಚಯ ಮಾಡಿಕೊಂಡು ಬೆದರಿಸಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಬಳಿಕ ನನ್ನಿಂದ ಹಣ, ಚಿನ್ನ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ. ಅದು ಅಲ್ಲದೇ, ಡಿ.10ರಂದು ನನ್ನ ಮನೆಗೆ ಸಯೀದ್, ಆತನ ತಾಯಿ, ಸಹೋದರಿ, ಇಬ್ಬರು ಸಾಕ್ಷಿಗಳು ಹಾಗೂ ಒಬ್ಬ ಖಾಝಿ ಬಂದು ಬಲವಂತವಾಗಿ ಕೆಲವು ನಿಕಾಹ್ ಕಾಗದ ಪತ್ರಗಳಿಗೆ ಸಹಿ ಮಾಡಲು ಹೇಳಿದ್ದ, ಆದರೆ ನಾನು ಒಪ್ಪದೇ ಇದ್ದುದಕ್ಕೆ ನನ್ನ ಮೇಲೆ ಅಲ್ಲೇ ಕೊಠಡಿಯಲ್ಲ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ತಿಳಿಸಿದ್ದಾಳೆ.
ಈ ಆರೋಪಗಳನ್ನು ಅಲ್ಲಗಳೆದಿರುವ ಸಯೀದ್ ತಾಯಿ, ಆಕೆಯ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳಾಗಿದೆ. ಯಾರಾದರೂ ಖಾಝಿಯನ್ನು ಕರೆದುಕೊಂಡು ಮನೆಗೆ ಹೋಗುತ್ತಾರೋ? ಇಂತಹಾ ಘಟನೆ ನಡೆದಿದ್ದರೆ ಇಷ್ಟು ಸಣ್ಣ ಊರಿನಲ್ಲಿ ಯಾರಿಗೂ ತಿಳಿಯದೇ ಇರಲು ಕಾರಣವೇನು? ಪೊಲೀಸರೆಲ್ಲಾ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸುತ್ತಾರೆ.
ಈ ಎರಡೂ ಪ್ರಕರಣಗಳಲ್ಲಿ ಹಲವಾರು ವೈರುಧ್ಯಗಳಿವೆ. ಮೊದಲನೇ ಪ್ರಕರಣದಲ್ಲಿನ ಯುವತಿಯು, ಯುವಕನು ನನ್ನ ಕುತ್ತಿಗೆಗೊಂದು ತಾವೀಝ್ (ಸರ) ಹಾಕಿದ್ದ. ಅದರಿಂದಾಗಿ ನಾನು ಸಮ್ಮೋಹನಕ್ಕೊಳಗಾಗಿ ಆತ ಹೇಳಿದಂತೆ ಕೇಳುತ್ತಿದ್ದೆ ಎಂದು ಹೇಳುತ್ತಾಳೆ. ಎರಡನೇ ಪ್ರಕರಣದಲ್ಲಿಯೂ ಹಲವಾರು ವೈರುದ್ಯಗಳು ಮತ್ತು ಸಾಮ್ಯತೆ ಇದೆ. ಈ ರೀತಿ ಹಲವಾರು ಪ್ರಕರಣಗಳು ದಿನಂಪ್ರತಿ ನಡೆಯುತ್ತಿದೆ. ಹಿಂದುತ್ವ ಗುಂಪುಗಳು ಮತ್ತೆ ಸಕ್ರಿಯವಾಗಲು ಪ್ರಾರಂಭವಾಗಿದೆ. ಸರಕಾರವೇ ಇವುಗಳಿಗೆಲ್ಲಾ ಬೆಂಬಲ ನೀಡುತ್ತಿದ್ದು, ವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣ ಮರೆಯಾಗುವ ಹಂತದಲ್ಲಿದೆ.







