ನಕಲಿ ಮತದಾರರ ನೋಂದಣಿಗೆ ನಿರಾಕರಿಸಿದ ಅಧಿಕಾರಿಯ ಕೊಲೆ!

ಫಿಲಿಬಿತ್, ಡಿ.27: ಮುಂಬರುವ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ನಕಲಿ ಮತದಾರರ ಹೆಸರುಗಳನ್ನು ನೋಂದಾಯಿಸಲು ನಿರಾಕರಿಸಿದ ಶಾಲಾ ಬೋಧಕರೊಬ್ಬರನ್ನು ಹೊಡೆದು ಸಾಯಿಸಲಾಗಿದೆ ಎಂದು ಮೃತ ಅಧಿಕಾರಿಯ ಪುತ್ರ ಆಪಾದಿಸಿದ್ದಾರೆ.
ಮತಗಟ್ಟೆ ಮಟ್ಟದ ಅಧಿಕಾರಿಯಾಗಿ ನಿಯೋಜಿತರಾಗಿದ್ದ 45 ವರ್ಷ ವಯಸ್ಸಿನ ಸೂರಜ್‌ಪಾಲ್ ವರ್ಮಾ ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆದರೆ ವರ್ಮಾ ಅವರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಯಾವುದೇ ಗಾಯದ ಗುರುತುಗಳನ್ನು ಉಲ್ಲೇಖಿಸಲಾಗಿಲ್ಲ ಎಂದು ಎಸ್ಪಿ ಜೈಪ್ರಕಾಶ್ ಹೇಳಿದ್ದಾರೆ. ಆದರೂ ಆರೋಪದ ಬಗ್ಗೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ದಿಢೀರನೇ ಅಸ್ವಸ್ಥಗೊಂಡ ಅಧಿಕಾರಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟರು ಎಂದು ಎಸ್ಪಿ ಹೇಳಿದ್ದಾರೆ.
ಈ ಘಟನೆ ಬಾರ್‌ಖೇಡ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುಂಬರುವ ಪಂಚಾಯತ್ ಚುನಾವಣೆಗೆ ಮತಗಟ್ಟೆ ಹಂತದ ಅಧಿಕಾರಿ (ಬಿಎಲ್‌ಓ) ಆಗಿ ಸೂರಜ್‌ಪಾಲ್ ವರ್ಮಾ ಅವರನ್ನು ನಿಯೋಜಿಸಲಾಗಿತ್ತು. ಗ್ರಾಮದ ಪಲ್ಲವ್ ಜೈಸ್ವಾಲ್ ಎಂಬಾತ ನಕಲಿ ಮತದಾರರ ಹೆಸರುಗಳನ್ನು ನೋಂದಾಯಿಸುವಂತೆ ಅವರ ಮೇಲೆ ಒತ್ತಡ ತಂದಿದ್ದ ಎನ್ನಲಾಗಿದೆ. ಇದಕ್ಕೆ ನಿರಾಕರಿಸಿದಾಗ ಅಧಿಕಾರಿಯನ್ನು ಶಾಲಾ ಕೊಠಡಿಯಿಂದ ಹೊರಕ್ಕೆ ಎಳೆದು, ನಿಂದಿಸಿ ಹಲ್ಲೆ ನಡೆಸಿದ್ದಾಗಿ ಆಪಾದಿಸಲಾಗಿದೆ ಎಂದು ಠಾಣಾಧಿಕಾರಿ ಕಮಲ್ ಸಿಂಗ್ ತಿಳಿಸಿದ್ದಾರೆ. ಅಧಿಕಾರಿ ಪ್ರಜ್ಞೆ ಕಳೆದುಕೊಂಡು ಬಿದ್ದಾಗ ಜೈಸ್ವಾಲ್ ಪರಾರಿಯಾಗಿದ್ದಾನೆ.







